ಕಾಸರಗೋಡು, ಅ 02 (DaijiworldNews/SM): ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಸಮರಕ್ಕೆ ಕ್ಷೇಣಗಣನೆ ಆರಂಬಗೊಳ್ಳುತ್ತಿದ್ದು, 101 ಮತಗಟ್ಟೆಗಳು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ 17 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಟಿಕಾರಾಂ ಮಿನಾ ತಿಳಿಸಿದ್ದಾರೆ. ಅವರು ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ, ಪೊಲೀಸ್ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ ಈ ಮಾಹಿತಿ ನೀಡಿದರು.
ಅಗತ್ಯ ಬಿದ್ದಲ್ಲಿ ಇನ್ನಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಕಳೆದ ಚುನಾವಣೆಯಲ್ಲಿ ನಕಲಿ ಮತಗಳ ಬಗ್ಗೆ ಅಭ್ಯರ್ಥಿಯೋರ್ವರು ದೂರು ಸಲ್ಲಿಸಿದ್ದರು. ನಕಲಿ ಮತದಾನ ಹಾಗೂ ಶಾಂತಿಯುತ ಮತದಾನ ಗುರಿಯಾಗಿದೆ. ಗಡಿ ಪ್ರದೇಶದ ಕ್ಷೇತ್ರವಾಗಿರುವುದರಿಂದ ಕರ್ನಾಟಕದಿಂದ ನಕಲಿ ಮತದಾನ ತಡೆಗಟ್ಟಲು ಅಗತ್ಯ ಕ್ರಮ ಎಂದು ಹೇಳಿದರು.
ಸಭೆಯ ಬಳಿಕ ಚುನಾವಣಾ ಆಯುಕ್ತರು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವಲೋಕನ ಸಭೆಯಲ್ಲಿ ಚುನಾವಣಾ ವೀಕ್ಷಕ ಯಶವಂತ ವಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಜೇಮ್ಸ್ ಜೋಸೆಫ್, ಮಂಜೇಶ್ವರ ಚುನಾವಣಾಧಿಕಾರಿ ಎನ್. ಪ್ರೇಮಚಂದ್ರನ್, ಕಾಸರಗೋಡು ಕಂದಾಯ ಅಧಿಕಾರಿ ಕೆ. ರವಿಕುಮಾರ್, ದಂಡನಾಧಿಕಾರಿ ಅಜೇಶ್, ಉಪ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಎನ್. ದೇವಿದಾಸ್, ಕೆ.ನಾರಾಯಣ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.