ಮಂಗಳೂರು, ಅ 02 (DaijiworldNews/SM): ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಪಕ್ಷಾಂತರದಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ನೆರೆ ಬಂದಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಇದೊಂದು ನಿಷ್ಕ್ರಿಯ ಸರ್ಕಾರ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಈ ಹಿಂದೆ ಹುಲಿ ಎಂದಿದ್ದರು. ಇದೀಗ ಆನೆ ಎನ್ನುತ್ತಿದ್ದಾರೆ. ಈ ವಿಚಾರ ಅವರು ಒಪ್ಪಿಕೊಂಡಿದ್ದು, ನಾನೇನು ಮಾತನಾಡುವುದಿಲ್ಲ ಎಂಬುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ವಿರುದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಸೂಲಿಬೆಲೆಗೆ ಅವರ ಪರವಾಗಿ ನಿಂತು ಸಾಕಾಗಿ ಹೋಗಿದೆ. ಅವರು ಹೇಳಿದ ಒಂದು ಮಾತು ಕೂಡ ಅನುಷ್ಠಾನವಾಗಿಲ್ಲ. ಸೂಲಿಬೆಲೆ ಹೇಳಿದ್ದೆಲ್ಲವೂ ಸುಳ್ಳು ಎನ್ನುವುದು ಜನರ ಮನಸ್ಸಿಗೆ ಬಂದಿದೆ. ಅವರು ಹೇಳಿದ್ದು ಯಾವುದೂ ಕೈಗೂಡಲೇ ಇಲ್ಲ ವಾಸ್ತವಿಕವಾಗಿ ಅವರ ಮಾತುಗಳು ಸುಳ್ಳು ಅನ್ನೋದು ಜನರಿಗೆ ಅರ್ಥವಾಗಿದೆ. ಇದೀಗ ಅವರೇ ಕೇಂದ್ರದ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಮಾತುಗಳು ಅನುಷ್ಟಾನಕ್ಕೆ ಬರದ ಹಿನ್ನೆಲೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ರಮಾನಾಥ ರೈ ಪ್ರತಿಕ್ರಿಯೆ ನೀಡಿದ್ದಾರೆ.