ಉಡುಪಿ, ಅ 03 (Daijiworld News/MSP): ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೂರೈವತ್ತನೇ ಹಾಗೂ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿಯವರ 115ನೇ ಜಯಂತಿಯನ್ನು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ 150 ಮಣ್ಣಿನ ಹಣತೆಗಳನ್ನು ಪ್ರಜ್ವಲಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಆರಂಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಉಡುಪಿ ಬಸ್ ನಿಲ್ದಾಣದ ಬಳಿಯಲ್ಲಿರುವ ಗಾಂಧೀಜಿಯವರ ಪುತ್ಥಳಿಗೆ ಹಾರಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಕಾಂಗ್ರೆಸ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡಿ ಗಾಂಧಿಜೀಯವರ ಪ್ರಮುಖ ತತ್ವಗಳಾಗಿದ್ದ ಸತ್ಯ, ಅಹಿಂಸೆ, ಸಹಿಷ್ಣುತೆಗಳಿಂದಾಗಿ ನೂರೈವತ್ತು ವರ್ಷಗಳ ಬಳಿಕವೂ ಇಡೀ ಜಗತ್ತು ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಭಾರತದಲ್ಲಿ ಜನ್ಮ ತಾಳಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ವಿಶ್ವದಲ್ಲಿ ಇಂದು ಅಸಾಮಾನ್ಯನಾಗಿ ನೆನಪಿಸಲ್ಪಡುತ್ತಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವಂತಹ ವಿಚಾರ ಎಂದು ನುಡಿದರು.
ಮಹಿಳಾ ಕಾಂಗ್ರೆಸ್ನ ಹಿರಿಯ ನಾಯಕಿ ಶ್ಯಾಮಲಾ ಭಂಡಾರಿಯವರು ಮಾತನಾಡಿ ಗಾಂಧೀಜಿಯವರ ಕನಸಿನ ಸ್ವಾತಂತ್ರ್ಯ ಭಾರತಕ್ಕೆ ಇನ್ನೂ ಸಿಗದಿರುವುದು ದೊಡ್ಡ ದುರಂತವೇ ಸರಿ. ಭಾರತದ ರಸ್ತೆಗಳಲ್ಲಿ ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲಿ ಒಂಟಿಯಾಗಿ ನಡೆದಾಡುವ ದಿನಗಳು ಬಂದಾಗ ಅಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆ ಅಂದುಕೊಳ್ಳುತ್ತೇನೆ ಎಂಬ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಇದರ ಬಗ್ಗೆ ನಾವು ಗಂಬೀರವಾಗಿ ಚಿಂತಿಸಬೇಕಾಗಿದೆ ಎಂದು ನುಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರಂತಹ ಮಹಾನ್ ವ್ಯಕ್ತಿತ್ವಗಳು ಇಂದಿನ ಪರಿಸ್ಥಿತಿಯಲ್ಲಿ ಬಹಳ ಅಗತ್ಯವಿದೆ. ಸರಳತೆ, ಸಹೋದರತೆಗಳನ್ನು ನಾವು ಈ ನಾಯಕರ ಜೀವನ ಚರಿತ್ರೆಗಳಿಂದ ಕಲಿಯಬೇಕಾಗಿದೆ. ಮುಂದಿನ ಪೀಳಿಗೆಗೂ ಕಲಿಸಬೇಕಾಗಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು ಸರ್ವರನ್ನೂ ಸ್ವಾಗತಿಸಿದರು. ಆರಂಭದಲ್ಲಿ ಗಾಂಧೀಜಿವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ್ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರೂ ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರದೆದುರು ಹಣತೆಗಳನ್ನು ಪ್ರಜ್ವಲಿಸುವ ಮೂಲಕ ಉಭಯ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಯು.ಆರ್.ಸಭಾಪತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಕಾರ್ಯದರ್ಶಿ ಹರೀಶ್ ಕಿಣಿ, ತಾ.ಪಂ. ಸದಸ್ಯೆ ಸುಜಾತಾ ಸುವರ್ಣ, ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಶೆಟ್ಟಿ, ಶ್ರೀಮತಿ ಮಮತಾ ಶೆಟ್ಟಿ, ಶ್ರೀಮತಿ ಚಂದ್ರಿಕಾ ಶೆಟ್ಟಿ, ಶ್ರೀಮತಿ ಸುಜಾತಾ ಆಚಾರ್ಯ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್, ಶ್ರೀಮತಿ ಸರಸ್ವತಿ ನಾಯ್ಕ್, ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಶ್ರೀಮತಿ ಚಂದ್ರಾವತಿ ಭಂಡಾರಿ, ಶ್ರೀ ಮಹಾಬಲ ಕುಂದರ್, ಶ್ರೀ ಉದ್ಯಾವರ ನಾಗೇಶ್ ಕುಮಾರ್, ಇಸ್ಮಾಯಿಲ್ ಆತ್ರಾಡಿ, ಶ್ರೀಮತಿ ರೋಶನಿ ಒಲಿವರ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಮತಿ ಗೋಪಿ. ಕೆ. ನಾಯ್ಕ್ ಧನ್ಯವಾದವಿತ್ತರು