ಉಳ್ಳಾಲ, ಅ 03 (DaijiworldNews/SM): ಮುಕ್ಕಚ್ಚೇರಿ ಬಳಿ ಸೆಪ್ಟೆಂಬರ್ 22ರ ತಡರಾತ್ರಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ ನನ್ನು ಮಂಗಳೂರು ಸಿಸಿಬಿ ಬಂಧಿಸಿದ್ದಾರೆ.
ಎರಡು ಗುಂಪುಗಳ ನಡುವೆ ಸಂಭವಿಸಿದ ಗುಂಡು ಹಾರಾಟ ಹಾಗೂ ದೊಂಬಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಮಂದಿಯನ್ನು ಈ ತನಕ ಬಂಧಿಸಲಾಗಿತ್ತು. ಸುಹೈಲ್ ಕಂದಕ್, ಬಶೀರ್ ಮತ್ತು ಇತರ ಆರು ಮಂದಿಯ ಗುಂಪು ಮುಕ್ಕಚ್ಚೇರಿಗೆ ಸೆ.22ರ ತಡರಾತ್ರಿ ತೆರಳಿ ಸಲ್ಮಾನ್ ಎಂಬಾತನನ್ನು ವಿಚಾರಿಸಿದ್ದಾರೆ. ಅಲ್ಲೇ ಇದ್ದ ಇನ್ನೊಂದು ತಂಡದ ಜತೆ ಮಾತುಕತೆ ನಡೆದು ಅದು ಅತಿರೇಕಕ್ಕೆ ತಿರುಗಿ ಸುಹೈಲ್ ಕಂದಕ್ ತನ್ನಲ್ಲಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ.
ಆ ಗುಂಡು ಇರ್ಶಾದ್ ಎಂಬಾತನ ಬಲಕಾಲಿನ ಮಂಡಿ ಚಿಪ್ಪಿನ ಕೆಳಗೆ ಪ್ರವೇಶಿಸಿದೆ. ಈ ಸಂದರ್ಭ ಇನ್ನೊಂದು ಗುಂಪು ಹಲ್ಲೆ ನಡೆಸಿದೆ. ಇದೇ ಸಂದರ್ಭ ಕಾರೊಂದನ್ನು ವಾಹನ ಹಾನಿಗೈಯಲಾಗಿದೆ. ಪ್ರಕರಣದಲ್ಲಿ ಸುಹೈಲ್ ಕಂದಕ್ ಮೇಲೆ ಹಲ್ಲೆಯಾಗಿತ್ತು. ಘಟನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದರು.
ಇನ್ನು ಗುಂಡು ಹಾರಾಟಕ್ಕೆ ಸಂಬಂಧಿಸಿ 6 ಮಂದಿ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿತ್ತು.