ಉಳ್ಳಾಲ, ಅ 03 (DaijiworldNews/SM): ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೋಟೆಕಾರು ಪೆಟ್ರೋಲ್ ಪಂಪ್ ಬಳಿಯಲ್ಲಿ ನಡೆದಿದ್ದ ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಸರಗೋಡಿನ ಮೇಲ್ಪರಂಬ, ಕಳನಾಡ್ ಮೊಹಮ್ಮದ್ ನಜೀಬ್ ಯಾನೆ ಕಲ್ಲಟ್ರ ನಜೀಬ್(46) ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣದ ವಿವರ:
2017ರ ಫೆಬ್ರವರಿ ತಿಂಗಳಲ್ಲಿ ಮಹಮ್ಮದ್ ಝಾಹಿದ್ ತನ್ನ ಸ್ನೇಹಿತ ಕಾಲಿಯಾ ರಫಿಕ್ನೊಂದಿಗೆ ಮುಜಿಬ್ ಹಾಗೂ ಫಿರೋಜ್ ರವರ ಜೊತೆಯಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಕಾರಿನಲ್ಲಿ ಹೊಸಂಗಡಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುತ್ತಿದ್ದರು.
ರಾತ್ರಿ12 ಗಂಟೆಗೆ ಮಂಗಳೂರು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ರಾಂಗ್ ಸೈಡ್ನಿಂದ ಟಿಪ್ಪರ್ ಲಾರಿಯನ್ನು ಆರೋಪಿಗಳ ಪೈಕಿ ಚಾಲಕ ರಶೀದ್ ಟಿಪ್ಪರ್ ಚಲಾಯಿಸಿದ್ದ. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾಲಿಯಾ ರಫೀಕ್ ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನತ್ತಿ ಬಂದ ಎರ್ಟಿಕಾ ಕಾರಿನಲ್ಲಿದ್ದ ಆರೋಪಿಗಳು ಕಾಲಿಯಾ ರಫೀಕ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಈ ಸಂದರ್ಭ ರಫೀಕ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಸುಮ್ಮನಾಗದ ಆರೋಪಿಗಳು ಆತನನ್ನು ಬೆನ್ನಟ್ಟಿ ಪಿಸ್ತೂಲ್ ನಿಂದ ಗುಂಡು ಹಾರಿಸಿ, ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆ ಮರೆಸಿಕೊಂಡಿದ್ದ ಆರೋಪಿ ನಜೀಬ್ ನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.