ಕುಂದಾಪುರ, ಅ 4 (Daijiworld News/RD): ಕರಾವಳಿಯಲ್ಲಿ ಕಠಿಣ ಕ್ರಮಗಳ ಹೊರತಾಗಿಯೂ ಅಕ್ರಮವಾಗಿ ಜಾನುವಾರುಗಳನ್ನು ಕದ್ದೊಯ್ಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ದಿನಗಳ ಹಿಂದೆ ಕುಂದಾಪುರದ ನೇರಳಕಟ್ಟೆ ಎಂಬಲ್ಲಿ ರಾತ್ರಿ ಮಲಗಿದ್ದ ಬಿಡಾಡಿ ದನವೊಂದನ್ನು ದುಷ್ಕರ್ಮಿಗಳು ವಾಹನದಲ್ಲಿ ಅಕ್ರಮವಾಗಿ ಕದ್ದೊಯ್ದ ಘಟನೆ ಸಿಸಿಕೆಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಇದೀಗ ಮತ್ತೆ ಅಂತಹುದೆ ಪ್ರಕರಣ ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿರುವ ಪೆಟ್ರೋಲ್ ಬಂಕಿನಲ್ಲಿ ನಡೆದಿದ್ದು, ಸಿಸಿಕೆಮೆರಾದಲ್ಲಿ ಸೆರೆಯಾಗಿದೆ.
ಅಂಪಾರು ಪೆಟ್ರೋಲ್ ಬಂಕಿನಲ್ಲಿ ತಡರಾತ್ರಿ ಕಾರೊಂದು ನಿಂತಿದ್ದು, ಪಕ್ಕದಲ್ಲಿಯೇ ಬಿಡಾಡಿ ದನವೊಂದು ಮಲಗಿತ್ತು. ಕಾರಿನಿಂದ ಇಳಿದವರು ದನವನ್ನು ಹಿಡಿದು ಕಾರಿನಲ್ಲಿ ತುಂಬಿಸುತ್ತಿರುವುದು ಕೆಮೆರಾದಲ್ಲಿ ದಾಖಲಾಗಿದೆ. ದನ ತುಂಬಿದ ಬಳಿಕ ಕಾರು ಮುಂದಕ್ಕೆ ಚಲಿಸಿದ ಸಂದರ್ಭವೇ ಲಾರಿಯೊಂದ ರಸ್ತೆಯಲ್ಲಿ ಬಂದು ನಿಂತಿದೆ. ಬಳಿಕ ಕಾರು ಒಂದು ಸುತ್ತು ಹಾಕಿ ಲಾರಿಯ ಹಿಂಬದಿಗೆ ಚಲಿಸಿದ್ದು ದಾಖಲಾಗಿದೆ. ಕಾರಿನಲ್ಲಿ ತುಂಬಿಸಿ ಚಲಿಸಿದ ಬಳಿಕ ಲಾರಿಗೆ ತುಂಬಿಸಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ಪ್ರಸನ್ನ ಕುಮಾರ್ ಎಂಬಾತ ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದು, ತನ್ನ ದನವೊಂದು ಕಳೆದು ಹೋಗಿದೆ ಎಂದು ದೂರಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.