ಸುಳ್ಯ,ಅ 4 (Daijiworld News/MSP): ಅಬುದಾಬಿ ಎಂದೂ ನೋಡಿದವನಲ್ಲ ಈ ಯುವಕ .. ಹೌದು ಆದರೂ ಇಂತದೊಂದು ಅದೃಷ್ಟ ಒಲಿದು ಬಂದಿದೆ ಎಂದರೆ ನಂಬಲೇಬೇಕು. ಅಬುಧಾಬಿಯ ಬಂಪರ್ ಬಹುಮಾನ , ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ದ ಜಟ್ಟಿಪಳ್ಳದ ಮೊಹಮ್ಮದ್ ಫಯಾಜ್ ಜೆ.ಎ (24) ಅವರ ಮನೆ ಬಾಗಿಲು ತಟ್ಟಿದೆ.
ತನ್ನ ಜೀವಮಾನದಲ್ಲೇ ಯುಎಇಗೆ ಎಂದಿಗೂ ಭೇಟಿ ನೀಡದ ಮೊಹಮ್ಮದ್ ಫಯಾಜ್ ಹಾಗೂ ಆತನ ಗೆಳೆಯರು, ಅ.03 ರ ಗುರುವಾರ ಸಂಜೆ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 12 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 23 ಕೋಟಿ ರೂಪಾಯಿ ಗೆದ್ದಿದ್ದಾರೆ.
ಸುಳ್ಯದ ಫಯಾಜ್ ಪ್ರಸ್ತುತ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಯಾಜ್, ಅವರ ಹೆತ್ತವರು ಮೃತಪಟ್ಟ ಕಾರಣ ಸಣ್ಣ ವಯಸ್ಸಿನಲ್ಲಿಯೇ ಸಹೋದರ ಮತ್ತು ಇಬ್ಬರು ಸಹೋದರಿಯರ ಹೊಣೆ ಹೊತ್ತು ಉದ್ಯೋಗ ಮಾಡುವುದು ಅನಿವಾರ್ಯವಾಗಿತ್ತು.
ಬಂಪರ್ ಬಹುಮಾನ ಒಲಿದು ಬಂದ ತಿಳಿಸಲು ಬಿಗ್ ಟಿಕೆಟ್ ಡ್ರಾದ ಮುಖ್ಯಸ್ಥರಾದ ರಿಚರ್ಡ್ ಎಂಬವರು ನಾಲ್ಕು ಬಾರಿ ಕರೆ ಮಾಡಿದಾಗಲೂ ಫಯಾಜ್ ಅವರು ಬೇರೊಂದು ಕರೆಯಲ್ಲಿ ಮಾತನಾಡುತ್ತಿದ್ದರು. ನಾಲ್ಕನೇ ಬಾರಿ ರಿಚರ್ಡ್ ಅವರು ಕರೆ ಮಾಡಿದಾಗ ಲೈನ್ ಸಂಪರ್ಕಗೊಂಡಾಗ, ಫಯಾಜ್ ಅವರಿಗೆ ತನ್ನ ಅದೃಷ್ಟವನ್ನು ನಂಬಲು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಫಯಾಜ್ "ಮೂತ್ರಪಿಂಡದ ಕಾಯಿಲೆಯಿಂದಾಗಿ ತಂದೆ ತಾಯಿ ಇಬ್ಬರೂ ಇತ್ತೀಚೆಗೆ ಮೃತಪಟ್ಟಿದ್ದಾರೆ. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ಈ ನಡುವೆ 12 ವರ್ಷಗಳ ಕಾಲ ಮೂತ್ರಪಿಂಡದ ವೈಫಲ್ಯದ ವಿರುದ್ಧ ಹೋರಾಡಿದರು. ಹೆತ್ತವರನ್ನು ಕಳೆದುಕೊಂಡ ನೋವಿನಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ. ನಮ್ಮ ಹೆತ್ತವರು ನಮ್ಮೊಂದಿಗೆ ಇಲ್ಲದಿರುವುದು ಬೇಸರದ ವಿಚಾರ . ನನಗೆ ತಂಗಿ, ಅಕ್ಕ ಇದ್ದು ಅಕ್ಕ ಮದುವೆಯಾಗಿದ್ದಾರೆ. ಈಗಾಗಲೇ ಮನೆ ನಿರ್ಮಿಸಲು ನಾವು ನಮ್ಮ ಜಮೀನಿನ ಒಂದು ಭಾಗವನ್ನು ಮಾರಿದೆವು. ಆದರೂ ಮನೆ ನಿರ್ಮಾಣ ಬಾಕಿಯಾಗಿಯೇ ಉಳಿದಿದೆ.
ಒಂದು ವರ್ಷದ ಹಿಂದೆ ನನ್ನ ಕುಟುಂಬವನ್ನು ಬೆಂಬಲಿಸಲು ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾದ ನನ್ನ ಸಹೋದರ ನಮ್ಮ ಮನೆಯ ಜವಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾನೆ. ”ಎಂದು ಫಯಾಜ್ ತಿಳಿಸಿದ್ದಾರೆ.
"ಬಿಗ್ ಟಿಕೆಟ್ ಖರೀದಿಸುವ ಬಗ್ಗೆ ಐಡಿಯಾ ನೀಡಿದ್ದು ನನ್ನ ರೂಮ್ಮೇಟ್. ಗಡುವು ಮುಗಿದಿದ್ದರಿಂದ ನನಗೆ ಎರಡು ತಿಂಗಳು ಖರೀದಿಸಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ ಕೊನೆಯ ದಿನ ನಾನು ನನ್ನ ರೂಮ್ ಮೇಟ್ಸ್ ಗಳು ಸೇರಿ ಖರೀದಿಸಿದ್ದೇವೆ. ಯಾರಿಗೆ ಎಷ್ಟು ಮೊತ್ತ ಆದರೆ ಸಿಗುತ್ತದೆ ಎನ್ನುವುದು ಇನ್ನು ನಿರ್ಧರಿಸಿಲ್ಲ. ನಾನು ನಿಜವಾಗಿಯೂ ಅದೃಷ್ಟಶಾಲಿ ವಿಜೇತನಾಗಿದ್ದೇನೆ.
ನನ್ನ ತಂಗಿ ಓದುತ್ತಿದ್ದಾಳೆ ಆದ್ದರಿಂದ ನಾನು ಅವಳಿಗೆ ಸಹಾಯ ಮಾಡಲು ಬಯಸುತ್ತೇನೆ. ಮಾರಾಟ ಮಾಡಿದ ಜಮೀನನ್ನು ಮತ್ತೆ ಖರೀದಿಸಲು ಇಷ್ಟವಿದೆ. ನಮ್ಮ ಮನೆಯ ನಿರ್ಮಾಣ ಕಾರ್ಯಗಳನ್ನು ಶೀಘ್ರದಲ್ಲೇ ಮುಗಿಸುವ ಆಸೆಯಿದೆ. ನಾನು ಯುಎಇಗೆ ಹೋಗಿಲ್ಲ. ಈಗ ನಾನು ಚೆಕ್ ಸ್ವೀಕರಿಸಲೆಂದು ಶೀಘ್ರದಲ್ಲೇ ಯುಎಇ ತೆರಳುತ್ತೇನೆ ಎಂದಿದ್ದಾರೆ.