ಮಂಗಳೂರು, ಅ 04 (Daijiworld News/MSP): ಲೋಕಸಭೆಯ ಚುನಾವಣೆಯ ಸಂದರ್ಭ ಸಂಸದರನ್ನು ನೋಡಬೇಡಿ, ಮೋದಿ ನೋಡಿ , ಅವರಿಗಾಗಿ ಮತ ನೀಡಿ ಎಂದಿದ್ದರು, ಇಂದು ಎಲ್ಲರಿಗಾಗಿ ಮೋದಿ ಅಲ್ಲ ಎಂದು ಸ್ಪಷ್ಟವಾಗಿದೆ. ಈಗ ಸಂಸದರನ್ನು ನೋಡಿ ವೋಟ್ ಹಾಕಬೇಕಿತ್ತು ಎಂದು ಜನಸಾಮಾನ್ಯರಿಗೂ ಅರ್ಥವಾಗಿದೆ. ಸಂಸತ್ ನಲ್ಲಿ ಧೈರ್ಯದಿಂದ ಮಾತನಾಡುವ ಶಕ್ತಿ ಬಿಜೆಪಿ ಸಂಸದರಿಗೆ ಇಲ್ಲವಾಗಿದೆ.
ಬಿಜೆಪಿ ನಾಯಕರೇ, ನಿಮ್ಮ ಜಂಜಾಟಕ್ಕೆ ಜನರ ಬಲಿ ಪಡೆಯಬೇಡಿ ಎಂದು ಶಾಸಕ ಯು.ಟಿ ಖಾದರ್ ಕಿಡಿಕಾರಿದ್ದಾರೆ. ಅವರು ನಗರದಲ್ಲಿ ಅ.04 ರ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಈ ಸಲ ಭೀಕರ ನೆರೆ, ಪ್ರವಾಹಕ್ಕೆ ಬೆಳ್ತಂಗಡಿ ನಲುಗಿ ಹೋಗಿದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂದ ಅನುದಾನ ಹೆಸರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜಾಹೀರಾತು ಹಾಕಿ ಪ್ರಚಾರ ಪಡೆದಿದ್ದರು. ಆದರೆ ಅಂದು ಬಿಟ್ಟಿ ಪ್ರಚಾರ ತೆಗೆದುಕೊಂಡ ಬಿಜೆಪಿ ಶಾಸಕ ಇಂದು ಯಾಕೆ ಕೇಂದ್ರದಿಂದ ಅನುದಾನ ತರಿಸಿಲ್ಲ..?ಎಂದು ಪ್ರಶ್ನಿಸಿದರು.
ಕರ್ನಾಟಕದ ಬರ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ರಾಜ್ಯದ ಆರೂವರೆ ಕೋಟಿ ಜನರಿಗೆ ಕೇಂದ್ರ ಅವಮಾನ ಮಾಡಿದೆ . ಇದರಿಂದಾಗಿ ಕೇಂದ್ರ ಸರ್ಕಾರವನ್ನು ಕನ್ನಡಿಗರನ್ನು ವೈರಿಗಳಾಗಿ ನೋಡುತ್ತಿದ್ದಾರೆ.ಕೇಂದ್ರ ಮಾಡಿದ ಅವಮಾನ ನೋಡಿ ಬಿಜೆಪಿ ರಾಜ್ಯದಲ್ಲಿ ಇರಬೇಕಾ..? ಗಂಜಿ ಊಟ ಮಾಡಿ ಕಣ್ಣೀರು ಹಾಕುವವರಿಗೆ ನ್ಯಾಯ ಕೊಡುವವರು ಯಾರು..?ಎಂದು ಪ್ರಶ್ನಿಸಿದ್ದಾರೆ.
ಇನ್ನು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಬಗ್ಗೆಯೂ ಕಿಡಿಕಾರಿದ ಹೆದ್ದಾರಿಯ ರಸ್ತೆಯ ಗುಂಡಿ ಮುಚ್ಚಲು ಯಾಕೆ ಅಸಡ್ಡೆ ಎಂದು ತಿಳಿಯುತ್ತಿಲ್ಲ. ಜನರು ಇಷ್ಟೊಂದು ವಿಶ್ವಾಸ ಇಟ್ಟು ಬಿಜೆಪಿಗೆ ಅಧಿಕಾರ ನೀಡಿದ್ದೇ ತಪ್ಪಾಗಿದೆಯಾ..?ಕೆಲಸ ಮಾಡುವ ಆಸಕ್ತಿ ಬಿಜೆಪಿ ಸರ್ಕಾರಕ್ಕೆ ಇಲ್ಲಎಂದು ಬಿಜೆಪಿ ಸಂಸದ, ಸರ್ಕಾರದ ವಿರುದ್ಧ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.