ಉಡುಪಿ, ಅ 04 (DaijiworldNews/SM): ಮಲ್ಪೆ ಬೀಚ್ಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರಸ್ತುತ ಇರುವ ಐದು ಜನ ಸಿಬ್ಬಂದಿಗಳ ಜೊತೆಗೆ ಹೆಚ್ಚುವರಿ ಐದು ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಲ್ಪೆ ಅಭಿವೃದ್ದಿ ಸಮಿತಿ ಸದಸ್ಯರಿಗೆ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಲ್ಪೆ ಬೀಚ್ ನೋಡಲು ಬರುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆಯಾಗಿರುವುದರಿಂದ ಪ್ರಸ್ತುತ ಇರುವ ಐದು ಜನ ಜೀವರಕ್ಷಕರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಐದು ಜನರನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇವರು ಜೀವ ರಕ್ಷಕ ಮತ್ತು ಹಸಿರು ಪೋಲಿಸ್ ಕರ್ತವ್ಯಗಳೆರಡನ್ನೂ ನಿಭಾಯಿಸುವಂತಿರಬೇಕು. ಹಾಗೂ ಕಡ್ಡಾಯವಾಗಿ ತುರ್ತು ಸಮಯದಲ್ಲಿ ಸ್ಪಂದಿಸುವಂತಾಗಿರಬೇಕು ಎಂದರು. ಸದ್ಯ ಕಾರ್ಯನಿರ್ವಹಿಸುತ್ತಿರುವ ಐದು ಜನ ಜೀವರಕ್ಷಕರು ಮತ್ತು ಹೊಸದಾಗಿ ನೇಮಕವಾಗುವ ಐದು ಜನರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಹತ್ತು ಜನ ಜೀವರಕ್ಷಕರು ವರ್ಷ ಪೂರ್ತಿ ಮಲ್ಪೆ ಬೀಚ್ ಪರಿಸರದಲ್ಲೇ ಇದ್ದು, ಅವಘಡಗಳಾದಾಗ ತ್ವರಿತ ಕಾರ್ಯಾಚರಣೆ ಮಾಡುವಂತಿರಬೇಕು. ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿ ಅಡಿಯಲ್ಲಿ ಈ ಜೀವರಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.