ಕುಂದಾಪುರ ಜ 3 : ಬ್ರಹ್ಮಾವರದಿಂದ ನಾಗೂರಿಗೆ ತೆರಳುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ತಗುಲಿ ಪರಿಣಾಮ ಓಮಿನಿ ಕಾರು ಪಲ್ಟಿಯಾದ ಘಟನೆ ತಾಲೂಕಿನ ಕೋಟೇಶ್ವರ ಅಂಡರ್ಪಾಸ್ ಬಳಿ ನಡೆದಿದೆ.
ಕಾರಿನಲ್ಲಿ ಒಂದು ವರ್ಷದ ಮಗು ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದು, ಓರ್ವ ಮಹಿಳೆಗೆ ಅಲ್ಪ ಪ್ರಮಾಣದ ಗಾಯಗಳಾದ ಹಿನ್ನೆಲೆ, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಮಗುವಿನ ಚಿಕಿತ್ಸೆಗೆಂದು ನಾಗೂರಿನಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ವಾಪಾಸು ನಾಗೂರಿಗೆ ತೆರಳುವ ಸಂದರ್ಭ ಕೋಟೇಶ್ವರ ಅಂಡರ್ ಪಾಸ್ ಕೊನೆಯಲ್ಲಿ ಬ್ಯಾರಿಕೇಡ್ ಇರುವುದರ ಅರಿವಿಲ್ಲದೇ ಓಮಿನಿ ಚಾಲಕ ಬಂದಿದ್ದಾನೆ. ಬ್ಯಾರಿಕೇಡ್ ಕಂಡ ಹಿನ್ನೆಲೆ ಏಕಾಏಕಿ ಬ್ರೇಕ್ ಅದುಮಿದ್ದಾನೆ. ಈ ಸಂದರ್ಭ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ತಗುಲಿದ್ದು ಪಲ್ಟಿಯಾಗಿದೆ. ತಕ್ಷಣ ಸ್ಥಳೀಯರು ಕಾರಿನಲ್ಲಿದ್ದವರ ನೆರವಿಗೆ ಧಾವಿಸಿ ಕಾರಿನಲ್ಲಿದ್ದವರನ್ನ ರಕ್ಷಿಸಿದ್ದಾರೆ. ಕುಂದಾಪುರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.