ಉಡುಪಿ ಜ 8: ಜಿಲ್ಲೆಗೆ ಜನವರಿ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಆಗಮಿಸುವ ಹಿನ್ನಲೆಯಲ್ಲಿ ಭದ್ರತೆಗಾಗಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಹೇಳಿದರು.
ಮುಖ್ಯಮಂತ್ರಿಯವರು ಕಾಪುವಿನಲ್ಲಿ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿಯವರು ಜ. 7ರಂದು ಮಂಗಳೂರಿನ ಕಾರ್ಯಕ್ರಗಳಲ್ಲಿ ಭಾಗವಹಿಸಿ ಅಲ್ಲಿಯೇ ವಾಸ್ತವ್ಯ ಹೂಡುವರು. 8 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೈಂದೂರಿಗೆ ಆಗಮಿಸಿ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಅಲ್ಲಿನ ಕಾರ್ಯಕ್ರಮದ ಬಳಿಕ ಹೆಲಿಕಾಪ್ಟರ್ ಮೂಲಕ ಆದಿಉಡುಪಿ ಹೆಲಿಪ್ಯಾಡ್ನಲ್ಲಿಳಿದು, ಉಡುಪಿ ಪ್ರವಾಸಿ ಬಂಗ್ಲೆಗೆ ತೆರಳುವರು. ನಂತರ ಬ್ರಹ್ಮಾವರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬ್ರಹ್ಮಾವರದಿಂದ ಹೊರಟು ಸಂಜೆ 4.30ಕ್ಕೆ ಕಾಪುವಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಉಡುಪಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬೈಂದೂರಿನಲ್ಲಿನ ಸಭೆಯಲ್ಲಿ ಸುಮಾರು 12ಸಾವಿರ, ಬ್ರಹ್ಮಾವರದಲ್ಲಿ 10 ಸಾವಿರ ಹಾಗೂ ಕಾಪುವಿನಲ್ಲಿ ಸುಮಾರು 8 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೂರು ಕಡೆ ನಡೆಯುವ ಸಾರ್ವಜನಿಕ ಸಭೆ ಸಂಬಂಧ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಭದ್ರತೆಗಾಗಿ ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಪುವಿನ ಪೇಟೆಯಲ್ಲಿಯೇ ಸಭೆ ನಡೆಯುವುದರಿಂದ ಜನರಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿಯವರು, ಜನರಿಗೆ ಸಮಸ್ಯೆಯಾಗುವುದು ಸಹಜ. ಸ್ಥಳಾವಕಾಶ ಕಡಿಮೆ ಇದ್ದರೂ ಇಲ್ಲಿ ಹಿಂದೆಯೂ ಹಲವಾರು ಕಾರ್ಯಕ್ರಮಗಳು ನಡೆದಿವೆ. ಬದಲಾಗಿ ಬೇರೆ ಸ್ಥಳದ ಕೊರತೆ ಇಲ್ಲಿದೆ. ಜನ ಇದಕ್ಕಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಭೆ ನಡೆಯುವ ಪೆಂಡಾಲ್ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮುಖ್ಯಮಂತ್ರಿ ಕಾರ್ಯಕ್ರಮದ ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.
ಉಡುಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಕಾರ್ಕಳ ವಲಯದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಣೆ, ಜಿಲ್ಲಾ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ಇದ್ದರು.