Karavali
ಪೊಲೀಸರು ದೀಪಕ್ ಹತ್ಯೆ ಆರೋಪಿಗಳನ್ನು ಸಿನಿಮಾ ಸ್ಟೈಲಿನಲ್ಲಿ ಚೇಸ್ ಮಾಡಿದ್ದು ಹೀಗೆ ...!
- Thu, Jan 04 2018 08:04:57 AM
-
ಸುರತ್ಕಲ್ ಜ 4: ಹಿಂದೂ ಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಜ 3 ರ ಬುಧವಾರ ಮಧ್ಯಾಹ್ನದ ವೇಳೆಗೆ ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕ್ಷಿಪ್ರ ಕಾರ್ಯಚರಣೆ ಮೂಲಕ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಣೇಶ್ ಕಟ್ಟೆಯ ನಿವಾಸಿ ದಿ. ರಾಮಚಂದ್ರ ಹಾಗೂ ಪ್ರೇಮ ದಂಪತಿಯ ಪುತ್ರನಾದ ದೀಪಕ್ ಸುಮಾರು 6 ವರ್ಷಗಳಿಂದ ಮುಡಾಯಿಕೋಡಿಯಲ್ಲಿ ಅಬ್ದುಲ್ ಮಜೀದ್ ನಡೆಸುತ್ತಿರುವ ಮೊಬೈಲ್ ಪೋನ್ ಮಳಿಗೆಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಧ್ಯಾಹ್ನ ಕರೆನ್ಸಿ ಕಲೆಕ್ಷನ್ ಮಾಡಿ ಮಳಿಗೆಯಿಂದ ಹೊರಟು ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಮಾರಾಕಾಯುಧಗಳಿಂದ ದಾಳಿ ನಡೆಸಿದರು. ತಲೆ ಮತ್ತು ಕೈಗೆ ತೀವ್ರ ಗಾಯಗೊಂಡ ದೀಪಕ್ ರಾವ್ ನೆಲಕ್ಕೆ ಬಿದ್ದಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ದೀಪಕ್ ಸಾವನಪ್ಪಿದ್ದಾರೆ.ಉದ್ವಿಗ್ನ ವಾತಾವರಣ- ಬಸ್ ಗೆ ಕಲ್ಲು
ದೀಪಕ್ ಹತ್ಯೆ ಬೆನ್ನಲ್ಲೇ ಸುರತ್ಕಲ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಎರಡು ಖಾಸಗಿ ಬಸ್ ಗಳಿಗೆ ಕಲ್ಲು ತೂರಲಾಗಿದೆ. ಬಸ್ ನ ಎರಡೂ ಗಾಜು ಪುಡಿಪುಡಿಯಾಗಿದೆ. ಹತ್ಯೆ ಖಂಡಿಸಿ ಸುರತ್ಕಲ್ ,ಕೃಷ್ಣಾಪುರ, ಕಾಟಿಪಳ್ಳ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.ಸಿನಿಮೀಯ ರೀತಿಯಲ್ಲಿ ಚೇಸ್
ದೀಪಕ್ ಅವರನ್ನು ಹತ್ಯೆಗೈದು ಬಿಳಿ ಬಣ್ಣದ ಶಿಫ್ಟ್ ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಘಟನೆ ನಡೆದ ಕೇವಲ ಮೂರುವರೆ ಗಂಟೆಯೊಳಗೆ ಸಿನಿಮೀಯ ರೀತಿಯಲ್ಲಿ ಸುಮಾರು 27 ಕಿಮೀ. ದೂರ ಚೇಸ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ನಿಜಕ್ಕೂ ವಿಶೇಷ. ಆರೋಪಿಗಳು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದರು. ಅಷ್ಟೊತ್ತಿಗೆ, ಆರೋಪಿಗಳು ಚಲಿಸುತ್ತಿದ್ದ ಕಾರಿನ ಬಗ್ಗೆ ಅನುಮಾನಗೊಂಡ ಮಾಹಿತಿದಾರರೊಬ್ಬರು ಕಿನ್ನಿಗೋಳಿಯಲ್ಲಿದ್ದ ಮುಲ್ಕಿ ಠಾಣೆ ಪೊಲೀಸರೊಬ್ಬರಿಗೆ ಮಾಹಿತಿ ಕೊಟ್ಟಿದ್ದರು. ತಕ್ಷಣ ಆ ಸಿಬ್ಬಂದಿಯು ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನದವರಿಗೆ ಮಾಹಿತಿ ನೀಡಿದರು. ಈ ವಾಹನದಲ್ಲಿ ಎಸ್ಐ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಇದ್ದು, ದುಷ್ಕರ್ಮಿಗಳ ಕಾರು ನೋಡಿದ ತಕ್ಷಣ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಆದರೆ, ಆರೋಪಿಗಳು ಕಾರು ನಿಲ್ಲಿಸದೆ ಎರ್ರಾಬಿರ್ರಿಯಾಗಿ ನುಗ್ಗಿಸುತ್ತ ಮುಂದಕ್ಕೆ ತಪ್ಪಿಸಿಕೊಂಡು ಹೋಗುತ್ತಿದ್ದರು. ಕೂಡಲೇ ಎಚ್ಚೆತ್ತುಕೊಂಡ ಮುಲ್ಕಿ ಪೊಲೀಸರು ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದುಕೊಂಡು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟುವುದಕ್ಕೆ ಶುರು ಮಾಡಿದರು. ಈ ನಡುವೆ ದುಷ್ಕರ್ಮಿಗಳು ಕಿನ್ನಿಗೋಳಿಯಿಂದ ದಾಬಸ್ಕಟ್ಟೆ, ಪಟ್ಟೆಕ್ರಾಸ್, ಕದ್ರಿ ಪದವು, ನಿಡ್ಡೋಡಿ ಮಾರ್ಗವಾಗಿ ಸಂಚರಿಸಿ ಧೂಮಚಡವು ಕ್ರಾಸ್ಗೆ ಬಂದು ಅಲ್ಲಿಂದ ಮಿಜಾರುಗುತ್ತು ದೋಟದ ಮನೆ ಮೂಲಕ ಪರಾರಿಯಾಗುವುದಕ್ಕೆ ಮುಂದಾಗಿದ್ದರು. ಆದಾಗಲೇ ಬೆನ್ನಟ್ಟಿ ಬರುತ್ತಿದ್ದ ಮುಲ್ಕಿ ಪೊಲೀಸರು ದುಷ್ಕರ್ಮಿಗಳ ಕಾರನ್ನು ಹಲವು ಬಾರಿ ನಿಲ್ಲಿಸುವಂತೆ ಸೂಚನೆ ಕೊಡುತ್ತ ಗುಂಡು ಕೂಡ ಹಾರಿಸಿದ್ದಾರೆ. ಆದರೆ, ದುಷ್ಕರ್ಮಿಗಳು ಪೋಲಿಸರ ಚೇಸಿಂಗ್ಗೂ ಕ್ಯಾರೇ ಮಾಡದೆ ಶರವೇಗದಲ್ಲಿ ಸಿಕ್ಕ ಸಿಕ್ಕ ಒಳ ರಸ್ತೆಗಳಲ್ಲಿ ವಾಹನವನ್ನು ನುಗ್ಗಿಸಿಕೊಂಡು ಹೋಗುತ್ತಿದ್ದರು.ಕೊನೆಗೂ ಎಡಪದವು ಸಮೀಪದ ಮಿಜಾರು ಗುತ್ತು ಗರಡಿ ಹಿಂಭಾಗದಲ್ಲಿರುವ ಒಳದಾರಿಯ ಮೋರಿಯೊಂದರ ಮೂಲಕ ಪರಾರಿಯಾಗುವುದಕ್ಕೆ ದುಷ್ಕರ್ಮಿಗಳು ಮುಂದಾಗಿದ್ದರು. ಆದರೆ, ಈ ಮೋರಿಗೆ ಹಾಕಿದ್ದ ಸೇತುವೆ ಮುರಿದು ಹೋಗಿದ್ದು, ತಾತ್ಕಾಲಿಕವಾಗಿ ಜನರ ಓಡಾಟಕ್ಕೆಂದು ಅದಕ್ಕೆ ಮರದ ಹಲಗೆಯನ್ನು ಹಾಕಲಾಗಿತ್ತು. ಹೀಗಾಗಿ, ಮೋರಿ ಕ್ರಾಸ್ ಮಾಡುತ್ತಿದ್ದಂತೆ ಹಲಗೆ ಮುರಿದು ಹೋಗಿ, ಕಾರು ಮೋರಿಯೊಳಗೆ ಸಿಲುಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದರು. ಕಾರಿನಿಂದ ಇಳಿದು ಪರಾರಿಯಾಗುವುದಕ್ಕೆ ಯತ್ನಿಸಿದರೂ ಇಕ್ಕಟ್ಟಿನ ಜಾಗದಲ್ಲಿ ಕಾರು ಸಿಕ್ಕಿಕೊಂಡಿದ್ದ ಕಾರಣ ಅದಕ್ಕೂ ಅಲ್ಲಿ ಅವಕಾಶವಿರಲಿಲ್ಲ. ಹೀಗಿರುವಾಗ, ಬೆನ್ನಟ್ಟಿಕೊಂಡು ಬಂದ ಮುಲ್ಕಿ ಪೋಲಿಸರ ತಂಡವು ದುಷ್ಕರ್ಮಿಗಳ ಕಾರಿನ ಮೇಲೆ ಮೂರ್ನಾಲ್ಕು ಬಾರಿ ಫೈರಿಂಗ್ ಮಾಡಿ ಹೆದರಿಕೆಯನ್ನು ಹುಟ್ಟಿಸಿದ್ದರು.
ಅಷ್ಟೊತ್ತಿಗೆ, ಅತ್ತ ಕಡೆಯಿಂದ ಬಜಪೆಯ ಠಾಣೆ ಪೊಲೀಸರು ಕೂಡ ಪ್ರತ್ಯೇಕ ವಾಹನವೊಂದರಲ್ಲಿ ಸ್ಥಳಕ್ಕೆ ದೌಡಾಯಿಸಿದ್ದು, ಇತ್ತ ಮೂಡಬಿದಿರೆ ಠಾಣೆ ಪೊಲೀಸರು ಕೂಡ ಅದೇ ಜಾಗಕ್ಕೆ ಬಂದು ಸೇರುವಲ್ಲಿ ಯಶಸ್ವಿಯಾಗಿದ್ದರು. ಆದಾಗಲೇ ಮುಲ್ಕಿ ಪೊಲೀಸರ ತಂಡವು ದುಷ್ಕರ್ಮಿಗಳ ಕಾರನ್ನು ಸುತ್ತುವರಿದು, ಹೊರಬರುವಂತೆ ಸೂಚಿಸಿದರು. ಆಗ, ಕಾರಿನಿಂದ ಇಳಿದು ತಪ್ಪಿಸಿಕೊಂಡು ಮುಂದಕ್ಕೆ ಓಡಿ ಹೋಗುವ ಯತ್ನ ಮಾಡುತ್ತ ನಾಲ್ವರ ಪೈಕಿ ಒಬ್ಬ ದುಷ್ಕರ್ಮಿಯು ತನ್ನ ಬಳಿಯಿದ್ದ ತಳವಾರಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಕೂಡ. ಇದರಿಂದ ಇನ್ಸ್ಪೆಕ್ಟರ್ ಒಬ್ಬರ ಕೈಗೂ ಸಣ್ಣ-ಪುಟ್ಟ ಗಾಯವಾಗಿದೆ. ಆದರೆ, ಪೋಲಿಸರ ಸಮಯ ಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ದುಷ್ಕರ್ಮಿಗಳಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.
ಡ್ರೆಸ್ ಚೇಂಜ್ ಮಾಡಿದ್ದ ದುಷ್ಕರ್ಮಿಗಳು
ಆರೋಪಿಗಳು ದೀಪಕ್ ಅವರನ್ನು ಹತ್ಯೆ ಮಾಡಿ ಕಾಟಿಪಳ್ಳದಿಂದ ಪರಾರಿಯಾಗಬೇಕಾದರೆ, ದಾರಿ ಮಧ್ಯೆ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ಬದಲಿಸಿದ್ದರು. ಅಂದರೆ, ಕೊಲೆ ಮಾಡಬೇಕಾದರೆ, ದೀಪಕ್ ಮೈ ಮೇಲಿನಿಂದ ರಕ್ತವು ದುಷ್ಕರ್ಮಿಗಳು ಧರಿಸಿದ್ದ ಟಿ-ಶರ್ಟ್ ಮೇಲೆ ಚಿಮ್ಮಿದ್ದು, ನೋಡುವವರಿಗೆ ಆರೋಪಿಗಳ ಮೇಲೆ ಸುಲಭದಲ್ಲಿ ಅನುಮಾನ ಮೂಡುವಂತೆ ಇತ್ತು. ಈ ಕಾರಣದಿಂದ ತಮ್ಮ ಮೇಲೆ ಯಾವುದೇ ಅನುಮಾನ ಬರಬಾರದು ಎಂಬ ಕಾರಣಕ್ಕೆ ದುಷ್ಕರ್ಮಿಗಳು ತಾವು ಧರಿಸಿದ್ದ ಬಟ್ಟೆಯನ್ನು ಕಾರಿನಲ್ಲಿ ಕುಳಿತುಕೊಂಡೇ ಬದಲಿಸಿದ್ದರು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಏಕೆಂದರೆ, ರಕ್ತಸಿಕ್ತವಾಗಿದ್ದ ಬಟ್ಟೆಗಳು ವಶಪಡಿಸಿಕೊಂಡಿದ್ದ ಶಿಫ್ಟ್ ಕಾರಿನೊಳಗೆ ಪತ್ತೆಯಾಗಿತ್ತು.
ಕಾರು ಚಾಲಕನ ಸಮಯ ಪ್ರಜ್ಞೆ....
ದೀಪಕ್ ಅವರನ್ನು ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿ ಮುಲ್ಕಿ ಪೊಲೀಸರು ಬಾಡಿಗೆಗೆ ಪಡೆದುಕೊಂಡಿದ್ದ ಖಾಸಗಿ ಕಾರಿನ ಚಾಲಕ ಎಂದರೆ ತಪ್ಪಾಗಲಾರದು. ಏಕೆಂದರೆ, ಕಿನ್ನಿಗೋಳಿಯಿಂದ ಮಿಜಾರು ಗುತ್ತು ವರೆಗಿನ ಸುಮಾರು 28 ಕಿಮೀ. ಕಡಿದಾದ ಒಳ ದಾರಿಯಲ್ಲಿ ದುಷ್ಕರ್ಮಿಗಳನ್ನು ಬೆನ್ನು ಬಿಡದೆ ಹಿಂಬಾಲಿಸಿಕೊಂಡು ಹೋಗುವುದು ಅಷ್ಟೊಂದು ಸುಲಭ ಕೂಡ ಇರಲಿಲ್ಲ. ಆದರೆ, ಪೊಲೀಸರ ಲೆಕ್ಕಾಚಾರದಂತೆ, ಅವರ ಮಾರ್ಗದರ್ಶದಲ್ಲಿ ಶರವೇಗದಲ್ಲಿ ದುಷ್ಕರ್ಮಿಗಳ ಕಾರಿನ ಹಿಂದೆಯೇ ಸುಮಾರು ಒಂದು ಗಂಟೆ ಕಾಲ ಚೇಸಿಂಗ್ ಮಾಡುತ್ತಲೇ ಆರೋಪಿಗಳು ಕೊನೆಗೂ ಸೆರೆ ಸಿಕ್ಕಬೇಕಾದರೆ, ಪೋಲಿಸರ ಕಾರನ್ನು ಚಲಾಯಿಸುತ್ತಿದ್ದ ಆ ಖಾಸಗಿ ಕಾರಿನ ಯುವ ಚಾಲಕನ ಚಾಣಾಕ್ಷತನ, ಸಮಯ ಪ್ರಜ್ಞೆ ಕಾರಣ ಎನ್ನಲಾಗಿದೆ.ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಈ ರೀತಿ ಸಿನಿಮೀಯ ಮಾದರಿಯಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಮಿಜಾರು ಗುತ್ತುವಿನಿಂದ ಪೊಲೀಸರ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ, ದೀಪಕ್ ಕೊಲೆ ವಿಚಾರವಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮೇಲ್ನೋಟಕ್ಕೆ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಕೊಲೆ ನಡೆದ ಕೆಲವೇ ತಾಸಿನೊಳಗೆ ಈ ರೀತಿ ಆರೋಪಿಗಳನ್ನು ಚೇಸ್ ಮಾಡಿ ಹಿಡಿದಿರುವ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆ ಇತಿಹಾಸದಲ್ಲಿ ನಡೆದೇ ಇಲ್ಲ ಎಂಬುದಾಗಿ ಬಣ್ಣಿಸಲಾಗುತ್ತಿದೆ. ಈ ಕಾರಣಕ್ಕೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ನಡೆಸಿದ ಈ ಮಾದರಿಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಪೊಲೀಸ್ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಂದ ಶಹಬಾಸ್ಗಿರಿ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಾಕಷ್ಟು ಅನುಮಾನ ಮೂಡಿಸಿರುವ ದೀಪಕ್ ಹತ್ಯೆ ಬೆನ್ನಲೇ ಆರೋಪಿಗಳನ್ನು ಕೂಡ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಸಫಲರಾಗಿರುವ ಕಾರಣ, ಈ ಹತ್ಯೆಗೆ ನಿಜವಾದ ಕಾರಣ ಏನು ಎಂಬುದು ಕೂಡ ಸದ್ಯದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.