ಸುರತ್ಕಲ್ ಜ 4 : ಕಾಟಿಪಳ್ಳದಲ್ಲಿ ಹತ್ಯೆಯಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಶವವನ್ನು ಜ 4 ರ ಮುಂಜಾನೆ ಪೊಲೀಸರು ಮನೆಯವರಿಗೆ ಮಾಹಿತಿ ನೀಡದೆ ಏಕಾಏಕಿ ಅಸ್ಪತ್ರೆಯ ಶವಗಾರದದಿಂದ ರಹಸ್ಯವಾಗಿ ಮೃತರ ಮನೆಗೆ ಖುದ್ದು ಪೊಲೀಸರೇ ಶವವನ್ನು ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದಿದ್ದಾರೆ. ಆದರೆ ತಮಗೆ ಮಾಹಿತಿ ನೀಡದೆ ಏಕಾಏಕಿ ಮೃತದೇಹವನ್ನು ತಂದ ಪೊಲೀಸರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೀಪಕ್ ಮನೆಯವರು ಶವವನ್ನು ಸ್ವೀಕರಿಸುವುದಕ್ಕೆ ನಿರಾಕರಿಸಿದ್ದಾರೆ, ಇದರಿಂದ ಒಂದೆಡೆ ಪೊಲೀಸರು ಪೇಚಿಗೆ ಸಿಲುಕಿದ್ದರೆ, ಇನ್ನೊಂದೆಡೆ ಮನೆಯ ಮುಂದೆ ಜಮಾಯಿಸಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ದೀಪಕ್ ಮನೆಯ ಅವರಣದಲ್ಲೂ ಬಿಗುವಿನ ಪರಿಸ್ಥಿತಿ ತಲೆದೋರಿದೆ. ಈ ನಡುವೆ ಮೃತದೇಹವನ್ನು ಸ್ವೀಕರಿಸುವಂತೆ ಪೊಲೀಸರು ಕೂಡಾ ದೀಪಕ್ ಮನೆಯವರು ಹಾಗೂ ಕಾರ್ಯಕರ್ತರ ಮನ ಒಲಿಸುವ ಪ್ರಯತ್ನ ಮಾಡುತಿದ್ದಾರೆ ಅಷ್ಟೇ ಅಲ್ಲದೆ ಶವ ಸಂಸ್ಕಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೂಡಾ ಇದೀಗ ದೀಪಕ್ ಮನೆಯತ್ತ ಆಗಮಿಸುತ್ತಿದ್ದಾರೆ.
ಈ ನಡುವೆ ಹಿಂದೂ ಸಂಘಟನೆಯ ಮುಖಂಡರು ಹಾಗೂ ಕುಟುಂಬಸ್ಥರು ಗೃಹಸಚಿವರ ಆಗಮನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಸಚಿವರು ಆಗಮಿಸುವವರೆಗೆ ಶವಸಂಸ್ಕಾರ ನಡೆಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ನಡೆಯ ವಿರುದ್ದ ಧಿಕ್ಕಾರ ಕೂಗುತ್ತಿದ್ದಾರೆ . ಇನ್ನೊಂದೆಡೆ ಕುಟುಂಬಸ್ಥರು ದೀಪಕ್ ಮೃತದೇಹವನ್ನು ಕೆಡದಂತೆ ಹವಾನಿಯಂತ್ರಿತ ಅಂಬ್ಯುಲೆನ್ಸ್ ಗೆ ಶಿಪ್ಟ್ ಮಾಡಿದ್ದಾರೆ.