ಸುಳ್ಯ, ಅ 07 (DaijiworldNews/SM): ಇಲ್ಲಿನ ಅಜ್ಜಾವರ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ರಬ್ಬರ್ ಕೃಷಿ ಮಾಡಿಕೊಂಡು ಬಂದ ಜಾಗವನ್ನು ಇದೀಗ ಅಜ್ಜಾವರ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಮಾಡಲು ಗುರುತಿಸಿದೆ.
ಗ್ರಾಮ ಪಂಚಾಯತ್ ನವರು ಕೈಗೊಂಡಿರುವ ಈ ನಿರ್ಧಾರವನ್ನು ಕೈ ಬಿಟ್ಟು ಆ ಜಾಗವನ್ನು ಆ ಮಹಿಳೆಗೆ ಬಿಟ್ಟು ಕೊಡಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಆದಿದ್ರಾವಿಡ ಸಮುದಾಯದ ಪ್ರಮುಖರಾದ ಕೆ.ಎಂ.ಬಾಬು ಜಾಲ್ಸೂರು ಮನವಿ ಮಾಡಿಕೊಂಡಿದ್ದಾರೆ. ಜಾಗದ ಫಲಾನುಭವಿ ಸುಶೀಲರವರು ಕೂಡಾ ಈ ಸಂದರ್ಭ ಉಪಸ್ಥಿತರಿದ್ದು ಆ ಜಾಗ ನನಗೆ ನೀಡಬೇಕೆಂದು ಪಂಚಾಯತ್ ಮತ್ತು ತಾಲೂಕು ಆಡಳಿತವನ್ನು ವಿನಂತಿಸುತ್ತೇನೆ ಎಂದು ಮನವಿ ಮಾಡಿಕೊಂಡರು.
ನೇಲ್ಯಡ್ಕದಲ್ಲಿ ಸರ್ವೆ ನಂಬ್ರ ೬೧/೨ಎಪಿ೧ ರಲ್ಲಿ ಸುಶೀಲರವರು ೨ ಎಕ್ರೆ ಜಾಗದಲ್ಲಿ ೬೦೦ ರಬ್ಬರ್ ಕೃಷಿ ಮಾಡಿದ್ದು, ಅದರಲ್ಲಿ ೪೫೦ ಗಿಡಗಳು ಈಗ ಹಾಲು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದು ಸರಕಾರಿ ಜಮೀನಾಗಿದೆ. ಇದನ್ನು ಅಕ್ರಮ ಸಕ್ರಮದಲ್ಲಿ ಮಾಡಿಕೊಳ್ಳಲು ಅವರು ಅರ್ಜಿಯನ್ನು ಹಾಕಿದ್ದಾರೆ. ಇದೀಗ ಈ ಜಾಗವನ್ನು ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿದ್ದು ಇದರಿಂದ ಇವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಘನತ್ಯಾಜ್ಯಕ್ಕೆ ಬೇರೆ ಜಾಗ ಗುರುತಿಸುವಂತೆ ವಿನಂತಿಸಿದ ಅವರು ಇದೇ ಸರ್ವೆ ನಂಬರ್ನಲ್ಲಿ ಒಟ್ಟು ೭.೭೩ ಎಕ್ರೆ ಸರಕಾರಿ ಜಮೀನಿದೆ. ಅದರಲ್ಲಿ ೨ ಎಕ್ರೆ ಸುಶೀಲರು ಕೃಷಿ ಮಾಡಿದರೆ ಉಳಿದ ಜಾಗವೂ ಒತ್ತುವರಿಯಾಗಿದೆ. ಅದೆಲ್ಲವನ್ನು ಬಿಟ್ಟು ಇವರ ಜಾಗ ಮಾತ್ರ ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿರುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ ಎಂದು ಬಾಬು ಕೆ.ಎಂ. ಎಚ್ಚರಿಕೆ ನೀಡಿದ್ದಾರೆ.