ಬಂಟ್ವಾಳ, ಅ.08(Daijiworld News/SS): ನವರಾತ್ರಿ ಮಹೋತ್ಸವವು ಇಂದು ಸಂಪನ್ನಗೊಳ್ಳುವ ಪರ್ವ ಕಾಲ. ಒಂದೆಡೆ ದಸರಾ ಉತ್ಸವಗಳ ಅದ್ದೂರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದರೆ, ಇನ್ನೊಂದೆಡೆ ನಾನಾ ಮಾದರಿಯ ಹುಲಿ ವೇಷವೂ ನವರಾತ್ರಿ ಉತ್ಸವದ ಮೆರುಗನ್ನು ಇಮ್ಮಡಿಗೊಳಿಸಿವೆ.
ಫರಂಗಿಪೇಟೆ 30ನೇ ವರ್ಷದ ಶಾರದಾ ಮಹೋತ್ಸವದ ಪ್ರಯುಕ್ತ ಬಂಟ್ವಾಳ ಫರಂಗಿಪೇಟೆಯಲ್ಲಿರುವ ಟೀಮ್ ವೀರಾಂಜನೇಯ ವ್ಯಾಯಾಮ ಶಾಲೆಯ ವಠಾರದಲ್ಲಿ ಹುಲಿ ವೇಷದ ‘ಊದು ಹಾಕುವ ಪೂಜೆ’ಯನ್ನು ಜನತಾ ವ್ಯಾಯಾಮ ಶಾಲೆ ಎಕ್ಕೂರು ಇದರ ನವೀನ್ ಮಾಸ್ಟರ್ ನೆರವೇರಿಸಿದರು.
ಫರಂಗಿಪೇಟೆ ಟೀಮ್ ವೀರಾಂಜನೇಯದ 10ನೇ ವರ್ಷದ ಹುಲಿ ವೇಷ ಇದಾಗಿದ್ದು, ಕಾರ್ಯಕ್ರಮದಲ್ಲಿ ಗಣ್ಯರಾದ ಪ್ರಭಾಕರ ಮಾಸ್ಟರ್, ಚಂದ್ರಶೇಖರ್ ಗಾಂಭೀರ, ರಘು ಪೂಜಾರಿ ತುಪ್ಪೆಕಲ್ಲು, ಸುಕುಮಾರ್ ಕರ್ಕೇರಾ ಸೇರಿದಂತೆ ನೂರಾರು ಮಂದಿ ಪೂಜಾದಿ ಕಾರ್ಯದಲ್ಲಿ ಪಾಲ್ಗೊಂಡು ಹುಲಿ ವೇಷಧಾರಿಗಳನ್ನು ಹರಸಿದರು. ದೇವರ ಮುಂಭಾಗ ಪ್ರಾರ್ಥನೆ ಬಳಿಕ ಹುಲಿ ವೇಷಧಾರಿಗಳ ನರ್ತನ ಮೈರೋಮಾಂಚನಗೊಳಿಸಿತು.
ನವೀನ್ ಮಾಸ್ಟರ್ ಹಾಗೂ ಅವರ ಪುತ್ರಿ ಧನ್ಯಶ್ರೀ ಎಕ್ಕೂರು ಅವರು ಕೂಡಾ ಹುಲಿ ವೇಷಧಾರಿಗಳೊಂದಿಗೆ ಕುಣಿಯುವ ಮೂಲಕ ವೀಕ್ಷಕರು ಮಂತ್ರಮುಗ್ಧರಾಗುವಂತೆ ಮಾಡಿದರು. ಹುಲಿಗಳ ವಿವಿಧ ಬಗೆಯ ಕಸರತ್ತೂ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.