ಕೊಲ್ಲೂರು, ಅ 8 (Daijiworld News/RD): ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ಮಹಾ ನವರಾತ್ರಿ ಉತ್ಸವದ ಅಂಗವಾಗಿ ಮಧ್ಯಾಹ್ನ 1.50 ಕ್ಕೆ ನಡೆದ ಶ್ರೀ ದೇವಿಯ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ನವರಾತ್ರಿ ಪ್ರಾರಂಭವಾದ ದಿನದಿಂದ ನವರಾತ್ರಿಯವರೆಗೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ಮಾಡಲಾಗಿತ್ತು. ಸೋಮವಾರ ಮಧ್ಯಾಹ್ನ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣಿ ಹಾಗೂ ಬಲಿ ಸೇವೆ ನಡೆದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.
ದೇವಸ್ಥಾನದ ತಂತ್ರಿ ನಿತ್ಯಾನಂದ ಅಡಿಗರು ರಥಾರೋಹಣಳಾದ ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು.
ದೇವಳದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ಬಂದು ಮತ್ತೆ ರಥ ಮೂಲ ಸ್ಥಾನವನ್ನು ತಲುಪಿದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆದುಕೊಳ್ಳಲು ಭಕ್ತರು ಹರಸಾಹಸ ಪಟ್ಟರು. ಉತ್ಸವ ಮೂರ್ತಿಯನ್ನು ರಥದಿಂದ ಕೆಳಕ್ಕೆ ತರುವ ಕ್ಷಣಗಳಿಗಾಗಿ ಕಾಯುತ್ತಿದ್ದ ಭಕ್ತ ವರ್ಗ, ಕ್ಷಣ ಮಾತ್ರದಲ್ಲಿ ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಕಿತ್ತು ಅಲಂಕೃತ ರಥವನ್ನು ಬರಿದುಗೊಳಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಎಂ ಶೆಟ್ಟಿ, ಸಮಿತಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗಾ ಕೊಲ್ಲೂರು, ಜಯಂತಿ ವಿಜಯಕೃಷ್ಣ ಪಡುಕೋಣೆ, ರಾಜೇಶ್ ಕಾರಂತ, ಆಭಿಲಾಷ್ ಪಿ.ವಿ, ನರಸಿಂಹ ಹಳಗೇರಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಾಂತಾಯ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಕೊಲ್ಲೂರು ಠಾಣಾಧಿಕಾರಿ ಎಂ.ಸಿ.ಶಿವಕುಮಾರ, ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚುಚ್ಚಿ ನಾರಾಯಣ ಶೆಟ್ಟಿ, ಕಿಶೋರ ಹೆಗ್ಡೆ, ಜಯಾನಂದ ಹೋಬಳಿದಾರ್, ಶರ್ಮಿಳಾ ಆಚಾರ್, ಮೋಹನ್ಚಂದ್ರ ನಂಬಿಯಾರ್ ಮುಂತಾದವರಿದ್ದರು.
ಮಂಗಳವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣೆ ಮಕ್ಕಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು.