ಬೆಂಗಳೂರು ಜ 4 : ಕಾಟಿಪಳ್ಳದ ನಿವಾಸಿ, ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಅವರ ಹತ್ಯೆಯಾದ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದು, ದೀಪಕ್ ರಾವ್ ಕೊಲೆ ದುಃಖಕರ ಸಂಗತಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರ ಯಾರ ಸಮುದಾಯದ ಪರವೂ ಇಲ್ಲ ,ವಿರೋಧವು ಇಲ್ಲ. ಕಾನೂನಿನ ದೃಷ್ಟಿಯಲ್ಲಿ ತಪ್ಪು ಮಾಡಿದರನ್ನು ಶಿಕ್ಷಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಇನ್ನು ಮಾಧ್ಯಮದವರು, ಮೃತ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಜತೆ ಚರ್ಚಿಸಿ ಪರಿಹಾರ ಕೊಡುವುದಾಗಿ ಹೇಳಿದರು. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶವಯಾತ್ರೆಗೆ ಪೊಲೀಸರು ಅವಕಾಶ ನೀಡಿಲ್ಲವೆಂದು ಸಮಜಾಯಿಸಿ ನೀಡಿ ಮಾಧ್ಯಮಗಳ ಪ್ರಶ್ನೆಗೆ ಹೆಚ್ಚು ಅವಕಾಶ ನೀಡದೆ ಮುಂದಕ್ಕೆ ಸಾಗಿಸಿದರು.
ಇನ್ನೊಂದೆಡೆ ಕಾಟಿಪಳ್ಳದಲ್ಲಿ, ಮೃತದೇಹವಿಟ್ಟ ಸ್ಥಳಕ್ಕೆ ಗೃಹ ಸಚಿವರು ಬರುವಂತೆ , ಇಲ್ಲವಾದಲ್ಲಿ ಶವಸಂಸ್ಕಾರ ನಡೆಸುವುದಿಲ್ಲ ಅಲ್ಲದೆ ಕನಿಷ್ಟ 25 ಲಕ್ಷ ರು. ಪರಿಹಾರ ಚೆಕ್ ನೀಡಬೇಕು ಎಂದು ಕಾಟಿಪಳ್ಯದ ಗ್ರಾಮಸ್ಥರು ಸೇರಿದಂತೆ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ತಿಳಿದು ಬಂದಿದೆ.