ಉಡುಪಿ, ಅ 08 (DaijiworldNews/SM): ಜಿಲ್ಲೆಯ ಗುಂಡಿಬೈಲು ವಾರ್ಡಿನಲ್ಲಿ ಜನತೆ ಉಸಿರು ಬಿಗಿ ಹಿಡಿದು ತಿಗುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಾರಿಯ ಮಳೆಯಿಂದಾಗಿ ಬಾವಿಯಲ್ಲಿ ನೀರಿದ್ದರೂ ಬಳಕೆಗೆ ಸಿಗದ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ.
ಪ್ರತಿ ವರ್ಷ ಈ ಭಾಗದ ಜನರು ನಳ್ಳಿ ಸಂಪರ್ಕ ಕೊಡಲು ಮನವಿ ಸಲ್ಲಿಸಿದರೂ ನಗರಸಭೆಯ ಅಧಿಕಾರಿಗಳು ಇಲ್ಲಿಯ ತನಕ ಸ್ಪಂದಿಸಿಲ್ಲ. ಕುಡಿಯಲು ದೂರದಲ್ಲಿರುವ ಬೇರೆ ಮನೆಯಿಂದ ನೀರು ತರಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳಿಗೆ ಬಂದೊದಗಿದೆ. ಇತರ ನಿತ್ಯ ಬಳಕೆಗೆ ಬೇರೆ ದಾರಿಯಿಲ್ಲದೆ ಅದೇ ನೀರನ್ನು ಬಳಸುವ ದುಸ್ಥಿತಿ ಇಲ್ಲಿನ ನಿವಾಸಿಗಳದ್ದು. ಹಿಂದಿನ ಜಿಲ್ಲಾಧಿಕಾರಿ ಇರುವಾಗ ಕಚೇರಿಗೆ ಹೋಗಿ ಮನವಿ ಮಾಡಲಾಗಿದ್ದರೂ, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.
ಇದಕ್ಕೆಲ್ಲ ಕಾರಣ ಮನೆಯ ಪಕ್ಕದಲ್ಲಿ ತೆರದ ಚರಂಡಿ ನೀರು ಹರಿಯುತ್ತಿರುವುದು. ಗುಂಡಿಬೈಲಿನ ಈ ಭಾಗದಲ್ಲಿ ಹಲವಾರು ಕಟ್ಟಡಗಳು, ಮನೆಗಳು ತಲೆ ಎತ್ತುತ್ತಿವೆ. ಇಲ್ಲಿಂದ ಹೊರಬರುವ ಕೊಳಚೆ ನೀರು ಶೌಚಾಲಯದ ನೀರು, ನೇರವಾಗಿ ಅಲ್ಲಿರುವ ಪಿಟ್ ಗೆ ಬಿಡಲಾಗುತ್ತಿದ್ದು ಇದೀಗ ನೀರು ತುಂಬಿ ಹೊರ ಬಂದು ನೇರವಾಗಿ ಮನೆಗಳಿರುವಲ್ಲಿ ಕೆಳಮುಖವಾಗಿ ಹರಿಯುತ್ತಿದೆ. ಮಳೆ ಬಂದಾಗ ಚರಂಡಿ ನೀರು ಸಾರಾಗವಾಗಿ ಹೋಗದಿದ್ದರೂ ಆ ಪ್ರದೇಶದಲ್ಲಿ ವಾಸನೆ ಇರುವುದಿಲ್ಲ. ಆದರೆ ಬಿಸಿಲಿಗೆ ಆ ತೆರದ ಚರಂಡಿಯಂತಿರುವ ತೋಡಿನಲ್ಲಿ ಕೊಳಕು ನೀರು ನಿಂತು ವಾಸನೆಯಿಂದ ಅಲ್ಲಿನ ವಾಸಿಗಳು ಮೂಗು ಮುಚ್ಚಿ ಕೊಂಡು ತಿರುಗಾಡಬೇಕಾದ ದುಸ್ಥಿತಿ ಎದುರಾಗಿದೆ.
ಇಲ್ಲಿ ಸುತ್ತಮುತ್ತಲೂ ನೂರಕ್ಕೂ ಮಿಕ್ಕಿ ಮನೆಗಳಿವೆ. ಅಲ್ಲಿನ ನಿವಾಸಿಗಳು, ಕಳೆದ ಬೇಸಗೆಯಲ್ಲಿ ಹೊಸ ಮಳೆಯ ನೀರು ಬಂದರೆ ಸರಿಹೋಗಬಹುದೆಂಬ ಆಶೆಯಿಂದ ಸಂಪೂರ್ಣ ಬಾವಿಯ ನೀರನ್ನು ತೆಗೆಸಿದ್ದರು. ಆದರೂ ಚರಂಡಿ ನೀರು ಮನೆಯ ಪಕ್ಕದಲ್ಲೇ ಹರಿಯುತ್ತಿದ್ದುದರಿಂದ ಕೊಳಕು ನೀರು ಬಾವಿಯನ್ನು ಸೇರಿಕೊಂಡಿದೆ. ನೀರಿನ ಬಣ್ಣ ನೀಲಿ ಬಣ್ಣ ಕ್ಕೆ ತಿರುಗಿದೆ. ಇದರ ಬಗ್ಗೆ ಆ ವಾರ್ಡ್ ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿಯವರು ಜನರ ಸಮಸ್ಯೆ ಗೆ ಅಲ್ಪ ಸ್ವಲ್ಪ ಸ್ಪಂದಿಸಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಶೌಚಾಲಯದ ನೀರು ಮತ್ತು ಮನೆ ಬಳಕೆಯ ನೀರು ಒಂದೇ ಪಿಟ್ ಗೆ ಸಂಪರ್ಕಿಸಿದ್ದರಿಂದ ಈ ಸಮಸ್ಯೆ ಪ್ರಾರಂಭವಾಗಿದೆ.
ಇದೇ ಜಾಗದಲ್ಲಿ ಒಂದು ಸರಕಾರಿ ನೆಕ್ಕರೆ ಕೆರೆ ಇದ್ದು ಬೇಸಿಗೆ ಕಾಲದಲ್ಲಿ ನೀರು ತುಂಬಿದ್ದರೂ ಅಲ್ಲಿ ಯಾರೂ ಉಪಯೋಗಿಸುವುದಿಲ್ಲವಂತೆ. ಹಲವು ವರ್ಷಗಳ ಹಿಂದೆ ಸಭಾಪತಿಯವರು ಈ ಕೆರೆಗೆ ಒಂದು ಆಕಾರ ಕೊಟ್ಟಿದ್ದರು. ಐದು ವರ್ಷಗಳ ಹಿಂದೆ 26 ಲಕ್ಷ ರೂಪಾಯಿ ವೆಚ್ಚದಲ್ಲಿ ಆವರಣೆ ಗೋಡೆ ಕಟ್ಟಿ ಜೀರ್ಣೋದ್ದಾರ ಮಾಡಲಾಗಿದ್ದು, ಈಗ ಕೆರೆಯ ನೀರನ್ನು ಅಗತ್ಯವಿದ್ದರೂ ಬಳಸುತ್ತಿಲ್ಲ. ಇದರ ನಿರ್ವಹಣಾ ಕೆಲಸವೂ ಸ್ತಬ್ಧವಾಗಿ ನಿಂತಿದೆ. ಅಲ್ಲದೆ ಮಕ್ಕಳು ಕೂಡ ಮಳೆಗಾಲದಲ್ಲಿ ಮಾತ್ರ ಈಜಲು ಬರುತ್ತಾರೆ ಆದರೆ ಈ ನಿಂತ ನೀರಿನ ಕಾರಣಕ್ಕೆ ಅಲ್ಲಿ ಯಾರು ಬರುವುದಿಲ್ಲವಂತೆ. ಈ ಕೆರೆಯಿಂದ ಹೆಚ್ಚದ ನೀರನ್ನು ಹೊರಬಿಡುವುದು ಕೂಡ ಇದೇ ತೋಡಿಗೆ.
ಒಟ್ಟಿನಲ್ಲಿ ಉಡುಪಿಯ ಗುಂಡಿಬೈಲು ವಾರ್ಡ್ ನ ಜನತೆ ಹಲವಾರು ಸಮಸ್ಯೆಗಳಿಂದ ನೊಂದುಕೊಂಡಿದ್ದರೂ ಕೂಡ ಸಂಬಂಧಿಸಿದ ಆಡಳಿತ ವರ್ಗ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.