ಬೆಳ್ತಂಗಡಿ, ಅ 09 (Daijiworld News/MSP): ಭಾರೀ ಸಿಡಿಲೊಂದು ಬಡಿದು ತೆಂಗಿನಮರ ಸುಟ್ಟಿರುವ ಘಟನೆ ಇಲ್ಲಿನ ಸನಿಹದ ಪೆಟ್ರೋಲ್ ಪಂಪ್ನ ಬಳಿ ಮಂಗಳವಾರ ನಡೆದಿದೆ.
ಸಂಜೆ 3 ರ ಬಳಿಕ ಏಕಾಏಕಿ ಮಳೆ ಸಿಡಿಲು ಮಿಂಚು ಆವರಿಸಿತ್ತು. ಸುಮಾರು 4 ಗಂಟೆ ಸಮಯಕ್ಕೆ ಸಿಡಿಲು ತೆಂಗಿನ ಮರಕ್ಕೆ ಬಡಿದ ಪರಿಣಾಮ ಬೆಂಕಿ ಕೆನ್ನಾಲಿಗೆ ಹೊತ್ತಿಉರಿದಿತ್ತು. ಸಮೀಪದಲ್ಲೆ ಪೆಟ್ರೋಲ್ ಬಂಕ್ ಇದ್ದು ಸ್ಥಳದಲ್ಲಿದ್ದವರಿಗೆ ವಿದ್ಯುತ್ ಸ್ಪರ್ಶದ ಅನುಭವವಾಗಿದೆ. ಪೆಟ್ರೋಲ್ ಬಂಕ್ ಪಂಪ್ ಕೈಕೊಟ್ಟಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಹೆಚ್ಚಾದ್ದರಿಂದ ಬೆಂಕಿ ತನ್ನಿಂತಾನೆ ಆರಿದೆ.
ಇನ್ನು ಪುದುವೆಟ್ಟು ಸಮೀಪದ ಯುವಕ ಮೊಹಮ್ಮದ್ ಶಮೀರ್ ಎಂಬವರಿಗೆ ಸಿಡಿಲು ಬಡಿದು ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಕಾಯರ್ತಡ್ಕ ಸೇರಿದಂತೆ ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ರಸ್ತೆಜಲಾವೃತವಾಗಿತ್ತು. ಸಂಜೆಯಾಗುತ್ತಲೆ ಸಿಡಿಲು ಗುಡುಗು ಹೆಚ್ಚಾಗಿತ್ತು.
ಕಳೆದ ಒಂದು ವಾರದಿಂದೀಚೆಗೆ ತಾಲೂಕಿನಲ್ಲಿ ಬೆಳಗಿನಿಂದ ಸಂಜೆಯವರೆಗೆ ಬಿಸಿಲಿನ ಧಗೆ ಬಳಿಕ ಘನಘೋರ ಸಿಡಿಲು ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿರುವುದು ಮಾಮೂಲಾಗಿದೆ.