ಮಂಗಳೂರು, ಅ.09(Daijiworld News/SS): ವಿಜಯದಶಮಿ ದಿನವಾದ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪೂಜಿಸಲ್ಪಟ್ಟ ನವದುರ್ಗೆ, ಶಾರದಾ ಮಾತೆ, ಮಹಾಗಣಪತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ನಡೆದರೆ, ನಗರದ ಹೊರವಲಯದಲ್ಲೂ ಹಲವು ಕಡೆಗಳಲ್ಲಿ ಪೂಜಿಸಲಾದ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಮೆರವಣಿಗೆ ನಡೆಯಿತು.
ಫರಂಗಿಪೇಟೆಯ 30ನೇ ವರ್ಷದ ಶಾರದಾ ಮಹೋತ್ಸವದ ಮೆರವಣಿಗೆಯೂ ಮಂಗಳವಾರದಂದು ಅದ್ದೂರಿಯಾಗಿ ನಡೆದಿದ್ದು, ಈ ಸಂದರ್ಭ ಫರಂಗಿಪೇಟೆಯ ಟೀಮ್ ವೀರಾಂಜನೇಯ ತಂಡದ ಹುಲಿ ವೇಷಧಾರಿಗಳ ನೃತ್ಯ ಎಲ್ಲರನ್ನೂ ಮೈರೋಮಾಂಚನಗೊಳಿಸಿತು.
ಸಂಜೆ 7 ಗಂಟೆ ಸುಮಾರಿಗೆ ಶಾರದಾ ಮಾತೆಯ ವಿಸರ್ಜನಾ ಪೂಜೆ ಬಳಿಕ ವೇದಿಕೆಯ ಪಕ್ಕದಲ್ಲೇ ಅಳವಡಿಸಲಾಗಿದ್ದ ಸಾಂಸ್ಕೃತಿಕ ವೇದಿಕೆಯಲ್ಲಿ ಟೀಮ್ ವೀರಾಂಜನೇಯದ ಹುಲಿ ವೇಷಧಾರಿಗಳು ವಿಶೇಷ ಪ್ರದರ್ಶನ ನೀಡಿದರು. ಬಳಿಕ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆದಿದ್ದು, ದಾರಿಯುದ್ದಕ್ಕೂ ನರ್ತಿಸಿದ ಹುಲಿವೇಷಧಾರಿಗಳು ಇದ್ದ ಟ್ಯಾಬ್ಲೋ ಕಂಡು ಭಕ್ತ ಸಮೂಹವೇ ಹರ್ಷದಿಂದ ಉದ್ಘಾರವೆಬ್ಬಿಸಿತು.
ಆಗಸದೆತ್ತರಕ್ಕೆ ಹಾರಿಸಿದ ಸುಡುಮದ್ದು, ಬಾಣಬಿರುಸುಗಳ ಚಿತ್ತಾರ ಒಂದೆಡೆಯಾದರೆ, ಇತ್ತ ಟ್ಯಾಬ್ಲೋದಲ್ಲಿ ಹುಲಿವೇಷಧಾರಿಗಳ ಮನಸೆಳೆಯುವ ಕುಣಿತ. ಫರಂಗಿಪೇಟೆ ಜಂಕ್ಷನ್ನಲ್ಲಿ ಕಿಕ್ಕಿರಿದು ತುಂಬಿದ್ದ ಜನಸಮೂಹವನ್ನು ಕಂಡು ಹುಲಿಗಳ ನರ್ತನವೂ ಜೋರಾಗಿತ್ತು.