ಮಂಗಳೂರು, ಸೆ14: ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆರೋಗ್ಯ ಸೇವೆಗಳನ್ನು ಮೊಬೈಲ್ ಆಪ್ಲಿಕೇಷನ್ ಮೂಲಕ ಜನರಿಗೆ ಒದಗಿಸುವ ಐ ರಿಲೀಫ್ ತುರ್ತುವ್ಯವಸ್ಥೆ ಸೇವಾ ಆಪ್ ನಾಳೆಯಿಂದ ಮಂಗಳೂರಿನಲ್ಲಿಯೂ ಆರಂಭಗೊಳ್ಳಲಿದೆ.
ಬೆಂಗಳೂರಿನಲ್ಲಿ ಆರಂಭವಾದ ಐ ರಿಲೀಫ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದೀಗ ರಾಜ್ಯಾದ್ಯಂತ ವಿಸ್ತರಿಸುವ ಯೋಜನೆಯಲ್ಲಿದೆ. ಈ ಸಂಸ್ಥೆಯು ಆಧುನಿಕ ತಂತ್ರಜ್ಞಾನವನ್ನು ಬಳಸಿ, ಸಾರ್ವಜನಿಕರಿಗೆ ಆಂಬುಲೆನ್ಸ್, ಹೋಮ್ ಕೇರ್, ರಕ್ತ ದಾಸ್ತಾನುಗಳ ನೈಜ ಸಮಯ ವಿವರಗಳ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವಕಾಂಕ್ಷಿ ಉದ್ದೇಶದಿಂದ ಯೋಜಿಸಲ್ಪಟ್ಟಿರುವ ಈ ತಂತ್ರಾಂಶವು ಆರ್ಥಿಕ ಮತ್ತು ಸಕಾಲಿಕ ಸೇವೆಯನ್ನು ತುರ್ತು ಪರಿಸ್ಥಿತಿಗಳಲ್ಲಿ ಮತ್ತು ಯೋಜಿತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುತ್ತದೆ.
ಸರಕಾರದ ಸಹಭಾಗಿತ್ವದಲ್ಲಿ ಕಾರ್ಯ ಆರಂಭಿಸುತ್ತಿರುವ ಈ ಐ ರಿಲೀಫ್ ತುರ್ತುವ್ಯವಸ್ಥೆ ಸೇವಾ ಆಪ್ ನಲ್ಲಿ ರಕ್ತ ನಿಧಿ ಸೇವೆಗಳ ಮಾಹಿತಿ ಲಭ್ಯವಿದೆ. ನಗರದಲ್ಲಿರುವ ರಕ್ತನಿಧಿ ಕೇಂದ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಐ ರಿಲೀಫ್, ರಕ್ತ ಸಂಗ್ರಹದ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ. ಅತ್ಯಂತ ಗರಿಷ್ಟ ಪ್ರಮಾಣದ ಗುಣಮಟ್ಟದೊಂದಿಗೆ ಆಸ್ಪತ್ರೆಗೆ ತಲುಪಿಸುವ ಸೇವೆ ಮತ್ತು ಸಂಚಾರದಟ್ಟನೆ ನಿವಾರಿಸಿ ತ್ವರಿತವಾಗಿ ಆಸ್ಪತ್ರೆಗೆ ರೋಗಿಗಳನ್ನು ತಲುಪಿಸುವ ನಿರ್ವಹಣಾ ವ್ಯವಸ್ಥೆಯನ್ನು ಐ ರೀಲಿಫ್ ಹೊಂದಿದೆ. ಇಷ್ಟೇ ಅಲ್ಲದೆ, ಔಷಧಗಳ ಚಿತ್ರ ಸಹಿತ ಸೂಕ್ತ ಮಾರ್ಗದರ್ಶನವನ್ನು ಜನರಿಗೆ ನೀಡಬಹುದಾದ ಐ ರಿಲೀಫ್ ಆಪ್ ಆರೋಗ್ಯ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.