ಸುರತ್ಕಲ್ ಜ 4 : ಕಾಟಿಪಳ್ಳದಲ್ಲಿ ಹತ್ಯೆಯಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಅವರ ಪಾರ್ಥೀವ ಶರೀರ ಜ 4 ರ ಗುರುವಾರ ಸುಮಾರು 3.30 ರ ವೇಳೆಗೆ ಪಂಚಭೂತಗಳಲ್ಲಿ ಲೀನವಾಯಿತು. ಶಿವಾಜಿ ಕ್ಷತ್ರೀಯ ಸಂಸ್ಕಾರದಂತೆ ವಿಧಿ ವಿಧಾನ ಪೂರೈಸಿದ ಬಳಿಕ ಅವರ ಸಹೋದರ ಸತೀಶ್ ರಾವ್ , ಪಾರ್ಥೀವ ಶರೀರಕ್ಕೆ ಸಾವಿರಾರು ಜನರ ಸಮ್ಮಖದಲ್ಲಿ ಅಗ್ನಿ ಸ್ಪರ್ಶ ಮಾಡಿದರು. ಅದಕ್ಕೂ ಮೊದಲೂ ಮೃತದೇಹವನ್ನು ಜನತಾ ಕಾಲೋನಿಯಲ್ಲಿ ರುದ್ರಭೂಮಿಯವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಅಲ್ಪಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ‘ದೀಪಕ್ ರಾವ್ ಅಮರ್ ರಹೆ’ ಎಂದು ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಅಂತಿಮ ವಿದಾಯ ಹೇಳಿದರು.
ಇನ್ನು ಸಂಸತ್ತಿನಲ್ಲೂ ದೀಪಕ್ ಹತ್ಯೆ ಪ್ರಕರಣ ಪ್ರತಿದ್ವನಿಸಿತು. ಸಂಸದ ಪ್ರಹ್ಲಾದ್ ಜೋಷಿ ಅವರು ದೀಪಕ್ ರಾವ್ ಹತ್ಯೆ ಸಹಿತ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದರು . ಎಲ್ಲಾ ಪ್ರಕರಣಗಳಲ್ಲೂ ಪಿಎಫ್ಐ ಪಾತ್ರ ಸ್ಪಷ್ಟವಾಗಿ ಕಂಡು ಬಂದಿದೆ. ರುದ್ರೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಎನ್ಐಎ ಹಾಕಿರುವ ಚಾರ್ಜ್ ಶೀಟ್ನಲ್ಲಿ ಸಂಘಟನೆಯ ಪಾತ್ರ ಸ್ಪಷ್ಟವಾಗಿದೆ. ಪಿಎಫ್ಐ ಸಂಘಟನೆಯನ್ನು ನಿಷೇಧಿಸುವ ಅಗತ್ಯವಿದೆ' ಎಂದು ಒತ್ತಾಯಿಸಿದರು. ಅಧಿವೇಶನದ ಆರಂಭಕ್ಕೂ ಮುನ್ನ ಸಂಸತ್ ಎದುರಿನ ಗಾಂಧಿ ಪ್ರತಿಮೆಯ ಎದುರು ರಾಜ್ಯದ ಬಿಜೆಪಿ ಸಂಸದರು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಅಲ್ಲದೆ ಕರ್ನಾಟಕ ಸಂಸದರ ನಿಯೋಗವು ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.