ಕಾಸರಗೋಡು, ಅ 10 (Daijiworld News/MSP): ಪತಿಯೇ ಪತ್ನಿಯನ್ನು ಕೊಂದು ಮೃತದೇಹಕ್ಕೆ ಕಲ್ಲು ಕಟ್ಟಿ ಹೊಳೆಗೆ ಎಸೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಪ್ರಮೀಳಾ (31) ಎಂದು ಗುರುತಿಸಲಾಗಿದೆ. ಪ್ರಮೀಳಾ ಎರಡು ವಾರಗಳಿಂದ ನಾಪತ್ತೆಯಾಗಿದ್ದು , ಈ ಬಗ್ಗೆ ಪತಿ ಶಿಲ್ಜೋ ಜೋನ್(34) ವಿದ್ಯಾನಗರ ಠಾಣೆಗೆ ದೂರು ನೀಡಿದ್ದ. ಆದರೆ ವಿಚಾರಣೆ ವೇಳೆ ಸಿಕ್ಕ ಸುಳಿವಿನಂತೆ ಶಿಲ್ಜೋ ಜೋನ್ ನನ್ನೇ ಹಿಡಿದು ವಿಚಾರಿಸಿದಾಗ ಕೊಲೆಮಾಡಿರುವ ವಿಚಾರ ಪೊಲೀಸರ ಮುಂದೆ ಬಾಯಿಬ್ಬಿಟ್ಟಿದ್ದಾನೆ.
ಮೂಲತಃ ಕೊಲ್ಲಂಕುಂಡರಂ ನಿವಾಸಿ ಸದ್ಯ ವಿದ್ಯಾನಗರ ಪನ್ನಿಪ್ಪಾರೆಯಲ್ಲಿ ವಾಸಿಸುತ್ತಿರುವ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ನಾಪತ್ತೆ ಬಗ್ಗೆ ದೂರು ನೀಡಿದ್ದ ಶಿಲ್ಜೋ ಜೋನ್ ಮುಂದೆ ತಲೆಕೆಡಿಸಿಕೊಳ್ಳದೆ ತಿರುಗಾಡುತ್ತಿರುವುದನ್ನು ಹಾಗೂ ತನಿಖೆಯ ಪ್ರಗತಿ ಬಗ್ಗೆ ವಿಚಾರಿಸಲು ಬಾರದಿರುವುದನ್ನು ಕಂಡು ಪೊಲೀಸರಿಗೆ ಆತನ ಮೇಲೆಯೇ ಸಂಶಯ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಶಿಲ್ಜೋ ಈ ಹಿಂದೆ ಎರ್ನಾಕುಳಂನ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ. ಈ ವೇಳೆ ಅಲ್ಲೇ ಫ್ಯಾನ್ಸಿ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದ ಪ್ರಮೀಳಾಳ ಪರಿಚಯ ಪ್ರೇಮಕ್ಕೆ ತಿರುಗಿ ಕಳೆದ ಹನ್ನೊಂದು ವರ್ಷಗಳಿಂದ ಅವರು ಪತಿ ಪತ್ನಿಯರಂತೆ ಕಾಸರಗೋಡಿನ ಹಲವೆಡೆ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಇವರು
ವಿದ್ಯಾನಗರ ಪನ್ನಿಪ್ಪಾರೆಯಲ್ಲಿ ಸ್ಥಳಾಂತರಗೊಂಡಿದ್ದರು. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವೂ ಇದೆ. ಈ ನಡುವೆ ಇವರಿಬ್ಬರು ಕಳೆದ ವರ್ಷ ಮದುವೆಯಾಗಿದ್ದಾರೆನ್ನಲಾಗಿದೆ. ಮದುವೆ ವೇಳೆ ಪ್ರಮೀಳಾ ಮತಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಿಲ್ಜೋ ಆಟೋ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದು, ಇತ್ತೀಚೆಗೆ ಬೇರೊಂದು ಯುವತಿಯನ್ನು ಪ್ರೀತಿಸತೊಡಗಿದ್ದ ವಿಚಾರ ಪ್ರಮೀಳಾಳಿಗೆ ತಿಳಿದು ದಂಪತಿಗಳ ಜಗಳಕ್ಕೆ ಕಾರಣವಾಗಿತ್ತು. ಸೆಪ್ಟಂಬರ್ ೧೯ರಂದು ರಾತ್ರಿ ಇದೇ ವಿಚಾರವಾಗಿ ದಂಪತಿಗಳ ನಡುವೆ ಜಗಳ ನಡೆದು ಪ್ರಮೀಳಾಳನ್ನು ಶೀಲ್ ಜೋ ಕೊಲೆ ಮಾಡಿ ಬಳಿಕ ಮೃತದೇಹವನ್ನು ತನ್ನ ಆಟೋರಿಕ್ಷಾದಲ್ಲಿ ಸಾಗಿಸಿ ತೆಕ್ಕಿಲ್ ಸೇತುವೆಯ ಬಳಿ ಎಸೆದಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮೃತದೇಹಕ್ಕಾಗಿ ಕಾಸರಗೋಡು ಅಗ್ನಿಶಾಮಕದಳ , ಮುಳುಗುತಜ್ಞರು , ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.