ಪಡುಬಿದ್ರಿ, ಅ 10 (Daijiworld News/MSP): ಪಡುಬಿದ್ರಿ ಪ್ರಸಿದ್ಧ ಬಾಲ ಗಣಪತಿಯ ವಿಸರ್ಜನಾ ಮೆರವಣಿಗೆ ವೇಳೆ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಸಂದರ್ಭ ಕೃಷ್ಣ ಸಾಲ್ಯಾನ್ ಎಂಬವರ ತಲೆಗೆ ಕಲ್ಲೇಟು ತಗುಲಿದ್ದು, ಗಾಯಾಳುವನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅ. 8 ರಂದು ಶೋಭಾಯಾತ್ರೆ ಮೂಲಕ ಗಣೇಶನನ್ನು ವಿಸರ್ಜಿಸಲಾಗುತಿತ್ತು. ಈ ವೇಳೆ ಮೆರವಣಿಗೆ ಸಾಗುವ ವೇಳೆ ನಾಸಿಕ್ ಬ್ಯಾಂಡ್ ಮತ್ತು ಚೆಂಡೆಯ ತಂಡಗಳ ನಡುವೆ ತಿಕ್ಕಾಟ ನಡೆದಿದೆ. ಈ ವೇಳೆ ಪರಿಚಯದವರೇ ಆಗಿದ್ದ ಹೇಮರಾಜ್, ದಿನೇಶ್ ಹಾಗೂ ಸ್ನೇಹಿತ್ ಕರ್ಕೇರ ಅವರು ಕೃಷ್ಣ ಸಾಲ್ಯಾನ್ ರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಬಳಿಕ ಕಲ್ಲು ತೂರಾಟವೂ ನಡೆದಿದ್ದು, ಈ ಹಿನ್ನೆಲೆ ಕೃಷ್ಣ ಅವರ ತಲೆಗೆ ಗಾಯವಾಗಿದೆ.
ಮೆರವಣಿಗೆ ಸಂದರ್ಭ ನಾಸಿಕ್ ಬ್ಯಾಂಡ್ ತಂಡದ ಸದ್ದು ಜೋರಾಗಿ ಯುವಕರ ಕುಣಿತ ಮೆರವಣಿಗೆಯಲ್ಲಿ ಗದ್ದಲ ಎಬ್ಬಿಸಿತ್ತು. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ಸಾವಿರಾರು ಜನ ಜಮಾಯಿಸಿದ್ದ ಮೆರವಣಿಗೆಯಲ್ಲಿ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಿದರೂ ಗಲಾಟೆ ತಣ್ಣಗಾಗಿಲ್ಲ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಕೃಷ್ಣ ಅವರ ತಲೆಗೆ ಕಲ್ಲೇಟು ಬಿದ್ದಿದೆ. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಾಲಗಣಪತಿಯನ್ನು ಗಣೇಶ ಚತುರ್ಥಿಯಂದು ಪ್ರತಿಷ್ಟಾಪಿಸಿ ಒಂದೂವರೆ ತಿಂಗಳುಗಳ ಕಾಲ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ವಿಜಯದಶಮಿಯಂದು ವೈಭವದ ಶೋಭಾಯಾತ್ರೆ ಮೂಲಕ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.