ಮಂಗಳೂರು, ಅ 11 (Daijiworld News/MSP): ವಿದ್ಯಾರ್ಥಿನಿಯೊಂದಿಗೆ ನಗರದ ಮಾಲ್ಗೆ ಸುತ್ತಾಡಲು ಬಂದ ಯುವಕನಿಗೆ ಐವರ ಹಲ್ಲೆ ನಡೆಸಿದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕಾವೂರು ಜ್ಯೋತಿನಗರ ನಿವಾಸಿ ಚೇತನ್ (23), ಶೃಂಗೇರಿ ನೆಲ್ಲೂರು ನಿವಾಸಿ ರಕ್ಷಿತ್ ಕುಮಾರ್ (21), ಕಂದುಕ ನಿವಾಸಿ ಅಶ್ವಿನ್ರಾಜ್ (21), ಕಾರ್ಕಳ ಇನ್ನಾ ನಿವಾಸಿ ಸುಶಾಂತ್ ಶೆಟ್ಟಿ (23), ಕಾರ್ಸ್ಟ್ರೀಟ್ ನಿವಾಸಿ ಶರತ್ ಕುಮಾರ್ (28) ಶಿಕ್ಷೆಗೊಳಗಾದ ಆರೋಪಿಗಳು.
ಪ್ರತಿಯೊಬ್ಬ ಅಪರಾಧಿಯು 21 ಸಾವಿರ ರೂ. ದಂಡ ಕಟ್ಟಬೇಕು, ತಪ್ಪಿದರೆ 8 ತಿಂಗಳ ಸಜೆ ಅನುಭವಿಸಬೇಕಾಗಿದೆ. ದಂಡದ ಮೊತ್ತದಲ್ಲಿ 50 ಸಾವಿರ ರೂ. ಯುವಕನಿಗೆ ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಉಡುಪಿಯ ಯುವಕನು ನಗರದ ಪಾಂಡೇಶ್ವರದ ಬಳಿ ಇರುವ ಮಾಲ್ನಲ್ಲಿ ತಿರುಗಾಡಿ ವಾಪಾಸ್ ಆಗೋ ವೇಳೆ 5ಮಂದಿ ಯುವಕರ ತಂಡ ತಡೆದು ಯುವಕನ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಘಟನೆ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯಿದುನ್ನೀಸಾ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನಲೆಯಲ್ಲಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ 11 ಮಂದಿ ಸಾಕ್ಷಿದಾರರು, 17 ದಾಖಲೆ ಪರಿಗಣಿಸಲಾಗಿದೆ.