ಕಾಸರಗೋಡು, ಅ 12 (Daijiworld News/MSP): ಪತ್ನಿಯನ್ನು ಕೊಲೆಗೈದು ಕಲ್ಲು ಕಟ್ಟಿ ಹೊಳೆಗೆ ಎಸೆದ ಘಟನೆಗೆ ಸಂಬಂಧಪಟ್ಟಂತೆ ಪತಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಣ್ಣೂರು ಆಲಕ್ಕೋಡ್ ನ ಶಿಲ್ಜೊ (32) ಎಂದು ಗುರುತಿಸಲಾಗಿದೆ. ಪತ್ನಿ ಪ್ರಮೀಳಾ(30)ಳ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಲ್ಜೊನ ಪ್ರೇಯಸಿ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ.
ಅನೈತಿಕ ಸಂಬಂಧ ವಿರೋಧಿಸಿದ್ದೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಶಿಲ್ಜೊ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಕ್ಕಿಲ್ ಹೊಳೆಗೆ ಎಸೆಯಲಾದ ಮ್ರತದೇಹಕ್ಕಾಗಿ ಶೋಧ ನಡೆಯುತ್ತಿದೆ. ಮೂರನೇ ದಿನವಾದ ಶನಿವಾರ ಕೂಡಾ ಮುಳುಗು ತಜ್ಞರು , ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ಮುಂದುವರಿಸಿದ್ದಾರೆ.
ವಿದ್ಯಾನಗರದ ಕ್ವಾಟರ್ಸ್ ವೊಂದರಲ್ಲಿ ವಾಸವಾಗಿದ್ದ ಶಿಲ್ಜೊ ಮತ್ತು ಪ್ರಮೀಳಾ ನಡುವೆ ವಾಗ್ವಾದ ನಡೆದು ಪ್ರಮೀಳಾ ಳನ್ನು ಕೊಲೆಗೈದಿದ್ದನು. ಸೆ. 19ರಂದು ರಾತ್ರಿ ಕೃತ್ಯ ನಡೆದಿತ್ತು. ಮೃತದೇಹವನ್ನು ಪ್ಲಾಸ್ಟಿಕ್ ಶೀಟ್ ನಲ್ಲಿ ಸುತ್ತಿ ಕಲ್ಲುಗಳನ್ನು ಕಟ್ಟಿ ತೆಕ್ಕಿಲ್ ಸೇತುವೆಯಿಂದ ಹೊಳೆಗೆ ಎಸೆದಿದ್ದನು. ಸೆ. 20 ರಂದು ಪತ್ನಿ ನಾಪತ್ತೆಯಾಗಿರುವುದಾಗಿ ವಿದ್ಯಾನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದ ಶಿಲ್ಜೊ ಬಳಿಕ ಈ ಬಗ್ಗೆ ಗಮನ ಹರಿಸದಿರುವುದರಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿದೆ. ಈತ ನೀಡಿದ ಸುಳಿವಿನಂತೆ ಮೃತದೇಹಕ್ಕಾಗಿ ತೆಕ್ಕಿಲ್ ಹೊಳೆಯಲ್ಲಿ ಶೋಧ ನಡೆಯುತ್ತಿದೆ. ಮೃತದೇಹ ಲಭಿಸಿದ ಬಳಿಕ ವಷ್ಟೇ ಹೆಚ್ಚಿನ ಮಾಹಿತಿ ಲಭಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.