ಮಂಗಳೂರು, ಅ.14(Daijiworld News/SS): ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಕ್ಟೋಬರ್ 15 ಮತ್ತು 16ರಂದು ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಅ.15ರಂದು 'ಯೆಲ್ಲೊ' ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ನೈಋತ್ಯ ಮಾರುತಗಳು ವೇಗವಾಗಿ ಬೀಸುತ್ತಿವೆ.
ಆಂಧ್ರದ ಕರಾವಳಿಯಲ್ಲಿ, ಅದರಲ್ಲೂ ಯಾನಂ ಪ್ರದೇಶದಲ್ಲೂ ಭರ್ಜರಿ ಮಳೆಯಾಗುತ್ತದೆ ಎಂದು ಐಎಂಡಿ ತಿಳಿಸಿದೆ. ಬೆಂಗಳೂರು ಸುತ್ತಮುತ್ತಲೂ ಸ್ವಲ್ಪ ಮಟ್ಟದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಮುಂಬೈನಲ್ಲಿ ಬಿಸಿಲು ಹೆಚ್ಚಾದರೂ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಇದೆ ಎನ್ನಲಾಗಿದೆ.