ಮಂಗಳೂರು, ಅ.14(Daijiworld News/SS): ಜನರಿಗೆ ಜನಪ್ರತಿನಿಧಿಗಳ ಚರ್ಚೆ ತಿಳಿಯುವ ಹಕ್ಕಿದೆ. ವಿಧಾನಸಭೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಕಲಾಪ ಲೈವ್ ಆಗಿ ನಡೆಯುತ್ತದೆ. ಆದರೆ ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇದು ಆರ್ ಎಸ್ ಎಸ್ ಮತ್ತು ಬಿಜೆಪಿ ಜಂಗಿಕುಸ್ತಿ. ರಾಜ್ಯದಲ್ಲಿ ಜನಪರ ಸರಕಾರ ಇಲ್ಲ. ಸರಕಾರಕ್ಕೆ ಆಡಳಿತ ಮುಂದುವರಿಸಲು ನೈತಿಕ ಹಕ್ಕಿಲ್ಲ ಎಂದು ದೂರಿದರು.
ನೆರೆ ಪರಿಹಾರ ವಿತರಿಸುವಲ್ಲಿ ರಾಜ್ಯ, ಕೇಂದ್ರ ವಿಫಲವಾಗಿದೆ. ಎನ್ ಡಿ ಆರ್ ಎಫ್ ಪ್ರಕಾರ 35 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ಕೊಟ್ಟದ್ದು 1200 ಕೋಟಿ ರೂ. ಮಾತ್ರ. ರಾಜ್ಯ ಸರಕಾರ ತನ್ನ ಮೊಂಡುತನದಿಂದ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ. ಕೊಡಗು ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ತನ್ನನ್ನು ತಾನೇ ಗುಂಡಿಕ್ಕಿ ಸಾಯುಸುವಂತಹ ಪರಿಸ್ಥಿತಿ ಬಂದಿದೆ. ರೈತರಿಗೆ ಧೈರ್ಯ ತುಂಬಿ ಸಾಲಮನ್ನಾ ಮಾಡಬೇಕಾಗಿದೆ. ರೈತರಿಗೆ ಪರಿಹಾರ ನೀಡಲು, ನೆರೆಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪ್ರಧಾನಿ ರಾಜ್ಯದ ಬಗ್ಗೆ ಗಮನಕೊಟ್ಟಿಲ್ಲ ಎಂದು ಟೀಕಿಸಿದರು.