ಉಡುಪಿ, ಅ 14 (DaijiworldNews/SM): ಶಾಸಕ ಕೆ ರಘುಪತಿ ಭಟ್ ಮತ್ತು ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಇವರ ನೇತೃತ್ವದ ನಿಯೋಗವು ಗುಜರಾತ್ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು ಮರಳು ಸಮಸ್ಯೆಗಳ ವಿಚಾರವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಗುಜರಾತಿನ ಅಹಮದಬಾದಿನಲ್ಲಿ ಸಭೆ ನಡೆಸಿ ನಾನ್ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯುವಂತಹ ಅವಕಾಶದ ಬಗ್ಗೆ ಚರ್ಚಿಸಿದರು. ಗುಜರಾತಿನ ಗಣಿ ಇಲಾಖೆಯ ಆಯುಕ್ತರಾದ ಅರುಣ್ ಕುಮಾರ್ ಸೋಲಂಕಿ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು.
ನಾನ್ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯಲು ಗುಜರಾತಿನಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಎಲ್ಲಾ ನಿಯಮ, ರೀತಿ ನೀತಿಗಳ ಬಗ್ಗೆ ಅಧ್ಯಯನ ನಡೆಸಿ ಇದರ ವಿಸ್ತೃತವಾದ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಗುಜರಾತಿನಲ್ಲಿ ಇರುವಂತಹ ಮರಳು ನೀತಿಯನ್ನು ಕರ್ನಾಟಕದಲ್ಲಿ ಅಳವಡಿಸುವ ಮೂಲಕ ರಾಜ್ಯದಲ್ಲಿ ಎದುರಾಗಿರುವ ಮರಳು ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ನಿಟ್ಟಿನಲ್ಲಿ ಈ ನಿಯೋಗ ಕಾರ್ಯಪ್ರವೃತವಾಗಿದೆ.
ಈ ನಿಯೋಗದಲ್ಲಿ ಕರ್ನಾಟಕದ ಹಿರಿಯ ಅಧಿಕಾರಿಗಳಾದ ಶಿವಶಂಕರ್ ರೆಡ್ಡಿ, ರಾಮ್ ಜೀ ನಾಯಕ್ ಹಾಗೂ ಇತರರು ಇದ್ದರು.