ಮೂಡುಬಿದಿರೆ, ಅ 14 (DaijiworldNews/SM): ಇಲ್ಲಿನ ತಾಲೂಕು ಕಚೇರಿಗೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಾಗಕರಿರೊಬ್ಬರ ದೂರಿನ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕಚೇರಿಯ ಅಟಲ್ಜೀ ಜನಸ್ನೇಹಿ ವಿಭಾಗ, ಸರ್ವೆ ವಿಭಾಗ ಹಾಗೂ ಉಪ ತಹಸೀಲ್ದಾರ್ ಕಚೇರಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಿತ ಎಂಟು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ನಡೆಸಿದ ಸಂದರ್ಭ ಸುಮಾರು 66 ಸಾವಿರ ಹೆಚ್ಚುವರಿ ಹಣ ಕಚೇರಿಯಲ್ಲಿ ಪತ್ತೆಯಾಗಿದೆ.
ಇನ್ನು ದಾಳಿ ಬಳಿಕ ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮೂಡುಬಿದಿರೆ ಎಸಿಬಿಗೆ ಕಂಡುಬಂದ ಮೊದಲ ಪ್ರಕರಣ ಇದಾಗಿದೆ. ಅಲ್ಪ ಪ್ರಮಾಣದ ಹೆಚ್ಚುವರಿ ನಗದು ಪತ್ತೆಯಾಗಿದೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಸಮಜಾಯಿಸಿ ನೀಡಿದ್ದು ತನಿಖೆ ನಡೆಸುತ್ತೇವೆ. ಒಂದು ವೇಳೆ ಸೂಕ್ತ ದಾಖಲೆಗಳಿಲ್ಲದ ಹಣವಾಗಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕಾರವಾರ, ಉಡುಪಿ, ಚಿಕ್ಕಮಗಳೂರು ವಿಭಾಗಗಳ ಒಬ್ಬರು ಎಸ್ಪಿ, ಐದು ಮಂದಿ ನಿರೀಕ್ಷಕರು, ಪೊಲೀಸ್ ಪೇದೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.