ಬಂಟ್ವಾಳ, ಅ 14 (DaijiworldNews/SM): ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬಂಟ್ವಾಳ ತಾಲೂಕಿನ ಸಜೀಪದ ಮಿತ್ತಮಜಲಿನ ಮಿತ್ತಕೆರೆಯಲ್ಲಿ ಅಕ್ಟೋಬರ್ ೧೪ರ ಸಂಜೆ ಪೊಲೀಸ್ ಗೌರವಗಳೊಂದಿಗೆ ನಡೆಯಿತು.
ಅಪರಾಹ್ನ 2 ಗಂಟೆಯ ಸುಮಾರಿಗೆ ಮಂಗಳೂರಿನಿಂದ ಹೊರಟ ಗೋಪಾಲನಾಥ್ ರವರ ಪಾರ್ಥಿವ ಶರೀರ 2.50 ರ ವೇಳೆಗೆ ಸಜಿಪಮೂಡ ಗ್ರಾಮಕ್ಕೆ ತಲುಪಿತು. ಬಳಿಕ ಇಲ್ಲಿನ ಮಿತ್ತಕೆರೆಯ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಬಳಿಕ ಪೊಲೀಸ್ ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಪಾರ್ಥಿವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದರು. ಬಳಿಕ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಮತಾಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ದೇವದಾಸ ಶೆಟ್ಟಿ, ಸದಾನಂದ ಪೂಂಜಾ, ಶ್ರೀಕಾಂತ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಸಂತೋಷ್ ಕುಮಾರ್ ರೈ ಬೋಳಿಯಾರ್, ಗ್ರಾ. ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಳ್ಚಡ ಮತ್ತಿತರರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.