ವಿಟ್ಲ, ಅ 14 (DaijiworldNews/SM): ಕೇರಳದ ಕಸಾಯಿಖಾನೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ದನ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಇಲ್ಲಿನ ಪಡ್ನೂರು ಗ್ರಾಮದ ಕೋಡಪದವು ಚನಿಲ ಎಂಬಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಆರೋಪಿ ಪರಾರಿಯಾಗಿದ್ದಾನೆ. ಕೋಡಪದವು ಕಡೆಯಿಂದ ಸಾಲೆತ್ತೂರು ರಸ್ತೆ ಮೂಲಕ ಕೇರಳದ ಕಸಾಯಿಖಾನೆಗೆ ಅಶೋಕ್ ಲೈಲ್ಯಾಂಡ್ ಟೆಂಪೊದಲ್ಲಿ ಎರಡು ದನ ಹಾಗೂ ಒಂದು ಹೋರಿಯನ್ನು ಕೊಂಡೊಯ್ಯಲಾಗುತ್ತಿತ್ತು.
ಬೀಟ್ ಪೊಲೀಸ್ ಸಿಬ್ಬಂದಿ ಮಂಜುನಾಥ ಅವರ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ಜಯಕುಮಾರ್ ಹಾಗೂ ಪ್ರತಾಪ್ ರೆಡ್ಡಿ ಅವರ ತಂಡ ಅಬ್ಬಕ್ಕ ಗಸ್ತು ಪಡೆಯ ವಾಹನದಲ್ಲಿ ಅಡ್ಡಗಟ್ಟಿದ್ದರು. ಈ ಸಂದರ್ಭ ಆರೋಪಿ ಪರಾರಿಯಾಗಿದ್ದಾನೆ.
ಕೆಲವು ತಿಂಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅಮುಲ್ ಐಸ್ ಕ್ರೀಂ ಗೆ ಸೇರಿದ ವಾಹನದಲ್ಲಿ ಅಕ್ರಮ ದನ ಸಾಗಾಟ ಮಾಡುವ ವೇಳೆ ಪೊಲೀಸರು ಪತ್ತೆ ಹಚ್ಚಿದ್ದರು. ಈ ಬಾರಿಯೂ ಅದೇ ವಾಹನದಲ್ಲಿ ವಾಹನದ ಬಣ್ಣಗಳನ್ನು ಅಳಿಸಿ ಮತ್ತೆ ಅದೇ ವಾಹನವನ್ನು ಈ ಕೃತ್ಯಕ್ಕೆ ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.