ಕುಂದಾಪುರ,ಅ 15 (Daijiworld News/MSP): ನಟ ಕಿಚ್ಚ ಸುದೀಪ್ ಅವರ ಅಭಿಮಾನಿಯ ಮೇಲೆ ವಿನಯ್ ಗುರೂಜಿ ಭಕ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಘಟನೆ ಭಾನುವಾರ ಸಂಜೆ ಸಂಗಮ್ ಶಾಲೆ ಬಳಿ ನಡೆದಿದ್ದು, ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿರುವ ರತ್ನಾಕರ್ ಪೂಜಾರಿ ಮೇಲೆ ನಾಲ್ವರು ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೋಮವಾರ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಗುರುರಾಜ್, ಸಂತೋಷ್ , ರವಿರಾಜ್, ಪ್ರದೀಪ್ ಅವರನ್ನು ಎಂದು ಗುರುತಿಸಲಾಗಿದೆ.
ಹಲ್ಲೆಗೆ ಒಳಗಾದ ರತ್ನಾಕರ್ ಪೂಜಾರಿ ನಟ ಸುದೀಪ್ ಅಭಿಮಾನಿಯಾಗಿದ್ದು, ಸುದೀಪ್ ರನ್ನು ಟೀಕಿಸಿದ್ದ ವಿನಯ್ ಗುರೂಜಿ ವಿರುದ್ದ ಇವರು ಫೇಸ್ ಬುಕ್ ಪೇಜ್ ನಲ್ಲಿ ಕಮೆಂಟ್ ಹಾಕಿದ್ದರು. ಇದೇ ಕಾರಣಕ್ಕೆ ವಿನಯ್ ಗುರೂಜಿಯನ್ನು ಟೀಕಿಸುತ್ತಿಯಾ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ:
ರತ್ನಾಕರ್ ಪೂಜಾರಿ ಕಾರು ಚಾಲಕರಾಗಿದ್ದು, ಬಾಡಿಗೆ ನೆಲೆಯಲ್ಲಿ ಕುಂದಾಪುರ ಸಂಗಮ್ ಬಳಿ ಬಂದಿದ್ದರು. ಈ ಸಂದರ್ಭ ಅವರ ಪರಿಚಯ ಗುರುರಾಜ್ ಪುತ್ರನ್ ಎಂಬವರು ಕರೆ ಮಾಡಿ ಮಾತನಾಡಲು ಇದೆ ಬಾ ಎಂದಿದ್ದರು. ಕಾರನ್ನು ಬಾಡಿಗೆ ನೆಲೆಯಲ್ಲಿ ತೆಗೆದುಕೊಂಡು ಬಂದಿರುವ ಕಾರಣ ಈಗ ಬರಲು ಸಾಧ್ಯವಿಲ್ಲ ಎಂದು ರತ್ನಾಕರ್ ತಿಳಿಸಿದ್ದರು. ಈ ವೇಳೆ ಸಂಗಮ್ ಶಾಲೆ ಬಳಿ ಹೊಂಚು ಹಾಕಿ ಕುಳಿತ ಗುರುರಾಜ್, ಸಂತೋಷ್, ಹಾಗೂ ಇನ್ನು ೮-೧೦ ಮಂದಿಯ ತಂಡ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ರತ್ನಕಾರ್ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅ.28 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.