ಬೆಳ್ತಂಗಡಿ, ಅ 15 (Daijiworld News/MSP): ತುಳು ಶಾಸನವೊಂದು ತಾಲೂಕಿನ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಂಡು ಬಂದಿದ್ದು ಇದು ಬಹು ಪ್ರಾಚೀನವೆಂದು ತಜ್ಞರಾದ ಡಾ| ವೈ. ಉಮಾನಾಥ ಶೆಣೈ ಮತ್ತು ಡಾ| ಎಸ್.ಆರ್.ವಿಘ್ನರಾಜರನ್ನು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 36 ವರ್ಷಗಳಿಂದ ದೇವಾಲಯದ ಆಗ್ನೇಯ ಮೂಲೆಯ ಕೋಣೆಯಲ್ಲಿದ್ದು ಸುಮಾರು 37 ಇಂಚು ಎತ್ತರ ಹಾಗೂ 13 ಇಂಚು ಅಗಲದ ಈ ಶಿಲಾಖಂಡವು ಪ್ರಾಚೀನ ಶಾಸನ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಭೂತದ ಕಲ್ಲು ಎಂದು ಭಾವಿಸಲಾಗಿದ್ದ ಈ ಕಲ್ಲಿನ ಕುರಿತು ಜ್ಯೋತಿಷಿಗಳು ಅನುಮಾನಗೊಂಡು ವಿಶ್ಲೇಷಿಸಿದಾಗ ದೇವಸ್ಥಾನ ಆಡಳಿ ಮೊಕ್ತೇಸರ ಸೂಚನೆಯಂತೆ ಹಿರಿಯ ಶಾಸನ ತಜ್ಞ ಡಾ| ವೈ. ಉಮಾನಾಥ ಶೆಣೈ ಮತ್ತು ಡಾ| ಎಸ್.ಆರ್.ವಿಘ್ನರಾಜರನ್ನು ಕರೆಸಿ ಓದಿಸಿದಾಗ ಇದು ಒಟ್ಟು 8 ಪಂಕ್ತಿಗಳಲ್ಲಿ ಬರೆದಿರುವ ಕ್ರಿ.ಶ. ಸುಮಾರು ೧೬ನೇ ಶತಮಾನದ ಒಂದು ಅಪೂರ್ವ ತುಳುಶಾಸನವೆಂದು ತಿಳಿದು ಬಂದಿದೆ.
ಶಾಸನದಲ್ಲಿ ಎರಡು ವಿಚಾರಗಳನ್ನು ತಿಳಿಸಲಾಗಿದೆ. ಇಚ್ಚೂರ ಉದಕಮಣಿ ಎಂದು ಪ್ರಸಿದ್ಧರಾದ ಈ ಬಾಲಸುಬ್ರಹ್ಮಣ್ಯ ದೇವರ ದೇವಾಲಯವು ರಾಜನಿರ್ಮಿತವಾದುದು. ಆದರೆ ಇಲ್ಲಿ ರಾಜನ ಹೆಸರು ಉಲ್ಲೇಖಗೊಂಡಿಲ್ಲ. ಉಳಿದಂತೆ ಮಾಚಾರ ಸಮಾಜದ ವಾಸಪ್ಪ ಎಂಬವನು ಶಾಸನವನ್ನು ರಚಿಸಿ ಈ ಶಿಲೆಯ ಮೇಲೆ ಬರೆದ. ನಾಗಗಳಿಗೆ ಮತ್ತು ಜಲಕ್ಕೆ ದೇವತೆಯಾಗಿರುವ ಸುಬ್ರಹ್ಮಣ್ಯನನ್ನು ಇಲ್ಲಿ ಉದಕಮಣಿ ಎಂದು ವಿಶೇಷವಾಗಿ ಕರೆಯಲಾಗುತ್ತಿತ್ತು. ಇಂದಿಗೂ ಇಲ್ಲಿ ಶ್ರೀ ಬಾಲಸುಬ್ರಹ್ಮಣ್ಯನನ್ನು ನೀರಿಗಾಗಿ ಪ್ರಾರ್ಥಿಸಿ ಧಾರಾಳನೀರನ್ನು ಪಡೆಯಲಾಗುತ್ತದೆ. ಆದುದರಿಂದ ಪ್ರಾಚೀನ ಕಾಲದಿಂದಲೂ ಉದಕಮಣಿಯೆಂದು ಶ್ರೀ ದೇವರನ್ನು ಸಂಬೋಧಿಸಲಾಗುತ್ತಿತ್ತು.
ಈ ಶಾಸನವನ್ನು ಓದುವುದರಲ್ಲಿ ಧರ್ಮಸ್ಥಳದ ಪವನಕುಮಾರ್ ಸಹಕರಿಸಿದ್ದರು. ದೇವಾಲಯದ ಆಡಳಿತ ಮೊಕ್ತೇಸರ ಹಾಗೂ ಅರ್ಚಕರಾದ ಸತೀಶ ಪುತ್ತೂರಾಯ ಮತ್ತು ಅವರ ಸಹೋದರ ಸೂರ್ಯನಾರಾಯಣ ಪುತ್ತೂರಾಯರು ವ್ಯವಸ್ಥೆಗೊಳಿಸಿದ್ದರು. ಚರಸ್ಥಿತಿಯಲ್ಲಿದ್ದ ಈ ಶಿಲಾಶಾಸನವನ್ನು ಈಗ ಸುರಕ್ಷಿತವಾಗಿ ಇಡಲಾಗಿದೆ.
ಶಾಸನದಲ್ಲಿನ ತುಳು ಲಿಪಿಯಲ್ಲಿನ ಕೆಲವು ಪದಗಳು
-ಸ್ವಸ್ತಿಶ್ರೀ
-ಹ (ಇ) ಚ್ಚೂರ ಉದಕ
-ಮಣಿಗಾದ್
-ರಾಜಕೃತ
-ಜ್ಜೆ (?) ಮಾಜಾರ
-ನರಮಾನಿಯೆರೆ
-ಮಾ (ವಾ) ಸಪ್ಪೆರೆ
-ಪದ ಬರಹ (ವು)