ಬಂಟ್ವಾಳ, ಅ 15 (DaijiworldNews/SM): ಬಿಸಿರೋಡಿನ ನಂದಿನಿ ಮಿಲ್ಕ್ ಪಾಯಿಂಟ್ ನಿಂದ ಕಳ್ಳತನ ಮಾಡಿದ ಆರೋಪಿಯನ್ನು ಬಂಟ್ವಾಳ ಅಪರಾಧ ವಿಭಾಗದ ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಸಾಲುಮರ ನಿವಾಸಿ ಯೂಸೂಪ್ ಅವರ ಪುತ್ರ ಕೆ.ಮಹಮ್ಮದ್ ಸಲಾಂ ಬಂಧಿತ ಆರೋಪಿ.
ಬಂಧಿತನಿಂದ ಒಂದು ಮೋಟಾರು ಸೈಕಲ್, ನಗದು ಹಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ 60ಸಾವಿರ ಎಂದು ಪೋಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿರುವ ನಂದಿನಿ ಮಿಲ್ಕ್ ಪಾಯಿಂಟ್ ನಲ್ಲಿ ಆ. 5ರಂದು ಮುಂಜಾನೆ ವೇಳೆ ಕಳವು ನಡೆದಿತ್ತು. ಅಲೋಶಿಯಸ್ ಡಿ.ಸೋಜ ಅವರಿಗೆ ಸೇರಿದ ನಂದಿನಿ ಮಿಲ್ಕ್ ಪಾಯಿಂಟ್ ಶಟರ್ ಮುರಿದು ಒಳಪ್ರವೇಶ ಮಾಡಿದ್ದ ಆರೋಪಿ ಕೌಂಟರ್ ನಲ್ಲಿದ್ದ ಹನ್ನೊಂದು ಸಾವಿರ ರೂಪಾಯಿ ಕಳವು ಮಾಡಿ ಪರಾರಿಯಾಗಿದ್ದ. ಆರೋಪಿಯನ್ನು ಅಕ್ಟೋಬರ್ 14ರಂದು ಸಾಯಂಕಾಲ ಮಾರ್ನಬೈಲು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ಸಂಜೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪೋಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕಿನಲ್ಲಿ ಬರುತ್ತಿದ್ದ ಆರೋಪಿ ಪೋಲಿಸರನ್ನು ನೋಡಿ ತಪ್ಪಿಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೋಲೀಸರು ಈತನನ್ನು ವಶಕ್ಕೆಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ. ಈತನ ವಿರುದ್ದ ಪುತ್ತೂರು ನಗರ ಠಾಣೆ,ಗೋವಾ ರಾಜ್ಯದ ಮಡಗಾಂವ್ ಪೋಲೀಸ್ ಠಾಣೆ, ಹಾಗೂ ಇತರ ಪೋಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ, ಎ.ಎಸ್.ಐ.ಸಂಜೀವ, ಎಚ್.ಸಿ.ಸುರೇಶ್ ಪಡಾರ್, ಸಿಬ್ಬಂದಿ ಗಳಾದ ಶ್ರೀಕಾಂತ್ ನಡಗೇರಿ, ಉಸ್ಮಾನ್ ವಾಲಿಕಾರ್, ಹಾಲೇಶ್ ಭಾಗವಹಿಸಿದ್ದರು.