ಮಂಗಳೂರು, ಅ 16 (Daijiworld News/MSP): ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ಪ್ರಮಾಣ ಅ.17ಕ್ಕೆ ಕಾದಿರಿಸಿ ಆದೇಶ ಹೊರಡಿಸಲಾಗಿದೆ.ಕೆಮ್ರಾಲ್ ಅತ್ತೂರು ಗ್ರಾಮ ಪಡುಬಳಿಕೆ ನಿವಾಸಿ ಅಜಿತ್ ಶೆಟ್ಟಿ (23) ಪ್ರಕರಣದ ಆರೋಪಿ.
ಸಂತ್ರಸ್ತೆಯೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸ್ನೇಹಿತೆಯ ಮುಖಾಂತರ ಹಿಟಾಚಿ ಚಾಲಕನಾಗಿದ್ದ ಅಜಿತ್ ಶೆಟ್ಟಿಯ ಪರಿಚಯವಾಗುತ್ತದೆ. ಬಳಿಕ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ಒಬ್ಬರಿಗೊಬ್ಬರು ಅನ್ಯೋನ್ಯವಾಗಿರುತ್ತಾರೆ.ಸುಮಾರು ಐದು ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿದ ಅಜಿತ್, ಆಕೆಯನ್ನು ಮದುವೆಯಾಗುವುದಾಗಿಯೂ ನಂಬಿಸುತ್ತಾನೆ. ಇದೇ ನೆಪದಲ್ಲಿ 2014ನೇ ಸೆಷ್ಟಂಬರ್ 4ರಂದು ಯುವತಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯನ್ನು ಅತ್ಯಾಚಾರಗೈಯುತ್ತಾನೆ.ಇದೇ ರೀತಿ ಪದೇಪದೇ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗುತ್ತಾನೆ. ಇದರಿಂದ ಯುವತಿ ಗರ್ಭವತಿಯಾಗಿದ್ದು, 2015ರ ಮೇ 29ರಂದು ಮೂಡುಬಿದಿರೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.
ಯುವತಿ ಹೆರಿಗೆಯಾದ ಬಳಿಕ ಅಜಿತ್ ಶೆಟ್ಟಿ ಆಸ್ಪತ್ರೆಗೂ ಹೋಗದೆ ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗುತ್ತಾನೆ. ಇದರಿಂದ ನೊಂದ ಯುವತಿ 2015ರ ಜು.22ರಂದು ಆತನ ವಿರುದ್ಧ ಮತ್ತು ಮದುವೆ ಮಾಡಲು ನಿರಾಕರಣೆ ಮಾಡಿದ ಆತನ ತಂದೆ ಹರೀಶ್ಚಂದ್ರ, ಅಣ್ಣ ಅಜಯ್ ಶೆಟ್ಟಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತದೆ. ಕೆಲವು ದಿನದ ಬಳಿಕ ಆರೋಪಿಯನ್ನು ಬಂಧಿಸಲಾಗಿದ್ದು, ಮೂರು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರುತ್ತಾನೆ.ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯಿದುನ್ನೀಸಾ ಅವರು ಅಪರಾಧವೆಸಗಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣವನ್ನು ಅ.17ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಮಗುವಿನ ಡಿಎನ್ಎ ವರದಿಯಲ್ಲಿ ಅಜಿತ್ ಶೆಟ್ಟಿ ಜೈವಿಕ ತಂದೆ ಎಂದು ರುಜುವಾತುಗೊಂಡಿದೆ. ಬಜ್ಪೆ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ ಅಜಿತ್ ಶೆಟ್ಟಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಂಬತ್ತು ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, 11 ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.