ವಿಟ್ಲ, ಜ 6: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ನಟಿಸಿ, ಆಕೆಗೆ ಮೋಸ ಮಾಡಿದ ಪರಿಣಾಮ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿಟ್ಲದ ಮಂಗಳಪದವು ಎಂಬಲ್ಲಿ ಘಟನೆ ನಡೆದಿದ್ದು, ಮೃತ ಬಾಲಕಿ ಪತ್ರತೋಟದ ಫಾತಿಮಾ ಮಿನಾಝ್ (19) ಎಂದು ತಿಳಿದುಬಂದಿದೆ.
ವೀರಕಂಬ ಗ್ರಾಮದ ಮಂಗಳಪದವು ದರ್ಖಾಸ್ ನಿವಾಸಿ ರಶೀದ್ (22), ವಿಟ್ಲದ ಶಾಲೆಯಲ್ಲಿ 9 ನೇ ತರಗತಿ ಕಲಿಯುತ್ತಿರುವ ಫಾತಿಮಾ ಮಿನಾಝ್ ನನ್ನು ಪ್ರೀತಿಸಿದ್ದು,ಈಕೆಯ ಜತೆ ಕೆಲವು ಸಮಯಗಳಿಂದ ಸುತ್ತಾಡುತ್ತಿದ್ದ. ಸೆಪ್ಟಂಬರ್ ತಿಂಗಳಿನಲ್ಲಿ ಪ್ರೀತಿ ಪ್ರೇಮದ ವಿಚಾರ ಬಾಲಕಿ ಮನೆಯವರಿಗೆ ತಿಳಿದು ಬಂದಿತ್ತು. ಬಳಿಕ ಅವರು ಮಾತುಕತೆ ನಡೆಸಿ ಮದುವೆ ವಯಸ್ಸು ಬಂದಾಗ ಮದುವೆ ಮಾಡಿ ಕೊಡುತ್ತೇವೆ ಎಂದು ತಿಳಿಸಿದ್ದರು.
ಈ ನಡುವೆ ರಶೀದ್ ಗೆ ಬೋಳಂತೂರು ಕಡೆಯ ಬೇರೆ ಯುವತಿ ಜತೆ ಮದುವೆ ನಿಶ್ಚಿಯ ನಡೆಸಲು ಸಿದ್ಧತೆ ನಡೆಸಿದ್ದರು. ಈ ವಿಚಾರವನ್ನು ರಶೀದ್ ಬೇರೆ ವ್ಯಕ್ತಿಗಳ ಮೂಲಕ ಬಾಲಕಿಗೆ ತಿಳಿಸಿದ್ದು, ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಮೆದುಳು ನಿಷ್ಕ್ರಿಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ರಶೀದ್ ವಿದೇಶಕ್ಕೆ ತೆರಳಿದ್ದು, ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.