Karavali
ಮಂಜೇಶ್ವರ: ತ್ರಿಕೋನ ಸ್ಪರ್ಧೆ - ರಂಗೇರಿದ ಚುನಾವಣಾ ಕಣ
- Thu, Oct 17 2019 09:59:00 AM
-
ಮಂಜೇಶ್ವರ, ಅ 17 (Daijiworld News/MSP): ಗಡಿನಾಡಾದ ಮಂಜೇಶ್ವರ ಉಪಸಮರಕ್ಕೆ ಸಜ್ಜಾಗುತ್ತಿದೆ. ತ್ರಿಕೋನ ಸ್ಪರ್ಧೆಯ ಮೂಲಕ ಮಂಜೇಶ್ವರ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಪ್ರಮುಖ ಮೂರು ಪಕ್ಷಗಳಿಗೆ ಈ ಚುನಾವಣೆ ನಿರ್ಣಾಯಕವಾಗಿದೆ. ಇನ್ನೂ ಒಂದೂವರೆ ವರ್ಷದೊಳಗೆ ನಡೆಯುವ ಕೇರಳ ವಿಧಾನಸಭಾ ಚುನಾವಣೆಗೆ ಉತ್ತರದ ತುತ್ತ ತುದಿಯ ಒಂದನೇ ವಿಧಾನಸಭಾ ಕ್ಷೇತ್ರದಲ್ಲಿನ ಉಪಚುನಾವಣಾ ಗೆಲುವು ಮುನ್ನುಡಿ ಬರೆಯಲಿದೆ.
ಇದರಿಂದ ಶತಾಯ ಗತಾಯ ಗೆಲ್ಲಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಒಕ್ಕೂಟವಾದ ಯುಡಿಎಫ್ , ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ಹಾಗೂ ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. 2016 ರಲ್ಲಿ ಬಿಜೆಪಿ ಕೇವಲ 89 ಮತಗಳಿಂದ ಸೋಲು ಕಂಡ ಈ ಕ್ಷೇತ್ರ ಉಪಚುನಾವಣೆ ರಾಷ್ಟ್ರ ಮಟ್ಟದ ಗಮನ ಸೆಳೆಯುವಂತೆ ಮಾಡಿದೆ. 1957 ರಲ್ಲಿ ಪ್ರಥಮ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದ ಎಂ. ಉಮೇಶ್ ರಾವ್ ಅವಿರೋಧ ಆಯ್ಕೆಯಾದ ಈ ಕ್ಷೇತ್ರ ಬಳಿಕದ ಚುನಾವಣೆಯಲ್ಲಿ ಪಕ್ಷಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಯಿತು. 1960 ರಲ್ಲಿ ಎರಡನೇ ಚುನಾವಣೆಯಲ್ಲಿ ಕನ್ನಡ ಹೋರಾಟಗಾರ ಕಳ್ಳಿಗೆ ಮಹಾಬಲ ಭಂಡಾರಿ ಪಕ್ಷೇತರರಾಗಿ ಈ ಕ್ಷೇತ್ರದಿಂದ ಕಣಕ್ಕಿಳಿದು ವಿಧಾನಸಭೆಗೆ ಪ್ರವೇಶಿಸಿದರು 1967 ರಲ್ಲಿ ಕಾಂಗ್ರೆಸ್ ನಿಂದ ಹಾಗೂ 1967 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮಹಾಬಲ ಭಂಡಾರಿ ವಿಧಾನಸಭೆಗೆ ಆಯ್ಕೆಯಾದರು.
1970 ರಿಂದ 1982 ರ ತನಕ ನಾಲ್ಕು ಬಾರಿ ಈ ಕ್ಷೇತ್ರ ಸಿಪಿಐ ಪಕ್ಷದ ಪಾಲಾಯಿತು. 1970 ಮತ್ತು 1977 ರಲ್ಲಿ ಎಂ. ರಾಮಪ್ಪ,1980 ಮತ್ತು 1982 ರಲ್ಲಿ ಡಾ.ಎ.ಸುಬ್ಬರಾವ್ ಆಯ್ಕೆಯಾದರು . ಮಂಜೇಶ್ವರಕ್ಕೆ ಕೇರಳ ಸಚಿವ ಸಂಪುಟದಲ್ಲಿ ಮೊದಲ ಸಚಿವ ಸ್ಥಾನ ಲಭಿಸಿತ್ತು. 1987ರಲ್ಲಿ ಚಿತ್ರಣವೇ ಬದಲಾಯಿತು . ಯುಡಿಎಫ್ ನಿಂದ ಸ್ಪರ್ಧಿಸಿದ್ದ ಚೆರ್ಕಳಂ ಅಬ್ದುಲ್ಲ ಈ ಕ್ಷೇತ್ರದಿಂದ ಗೆಲ್ಲುವ ಮೂಲಕ ಗಮನಸೆಳೆದರು. ಬಿಜೆಪಿಯಿಂದ ಕಣಕ್ಕಿಳಿಸಿದ್ದ ಶಂಕರ ಆಳ್ವ ಎರಡನೇ ಸ್ಥಾನ ಪಡೆದರು. ಇಲ್ಲಿಂದ ಮಂಜೇಶ್ವರ ರಾಜಕೀಯ ಹೋರಾಟಕ್ಕೆ ಮುನ್ನುಡಿ ಬರೆಯಿತು. 1987 ರಿಂದ ಬಿಜೆಪಿ ಮಂಜೇಶ್ವರ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. 2016 ರಲ್ಲಿ ಬಿಟ್ಟರೆ ಉಳಿದಂತೆ ಭಾರೀ ಅಂತರದ ಮುಖಭಂಗ ಬಿಜೆಪಿ ಎದುರಿಸುವಂತಾಗಿದೆ. ರಾಜ್ಯ ಮಟ್ಟದ ನಾಯಕರುಗಳನ್ನು ಕಣಕ್ಕಿಳಿಸಿದರೂ ಸೋಲು ಕಾಣುವಂತಾಯಿತು.
ಯುಡಿಎಫ್ ನ ಗೆಲುವಿನ ನಾಗಾಲೋಟ 2006 ರಲ್ಲಿ ಚೆರ್ಕಳಂ ಅಬ್ದುಲ್ಲ ರವರು ಎಲ್ ಡಿಎಫ್ ನ ಸಿ.ಎಚ್ ಕುಞ0ಬು ರವರ ವಿರುದ್ಧ ಸೋಲು ಕಾಣುವ ಮೂಲಕ ಕಡಿವಾಣ ಬೀಳುವಂತಾಯಿತು.ಪಕ್ಷದೊಳಗಿನ ಆಂತರಿಕ ಭಿನ್ನಮತ ಚೆರ್ಕಳಂ ಅಬ್ದುಲ್ಲ ರವರ ಸೋಲಿಗೆ ಪ್ರಮುಖ ಕಾರಣವಾಯಿತು. ಬಿಜೆಪಿ ಎರಡನೇ ಸ್ಥಾನ ಪಡೆದರೆ ಮುಸ್ಲಿಂ ಲೀಗ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು. ಆದರೆ 2011 ರಲ್ಲಿ ಯು ಡಿ ಎಫ್ ಗೆ ಮತ್ತೆ ಅದ್ರಷ್ಟ ಖುಲಾಯಿಸಿತು. ಚೆರ್ಕಳಂ ಬದಲಿಗೆ ಪಿ .ಬಿ ಅಬ್ದುಲ್ ರಜಾಕ್ ರಿಗೆ ಪಕ್ಷ ಟಿಕೆಟ್ ನೀಡಿತು. ಅಬ್ದುಲ್ ರಜಾಕ್ ಗೆಲ್ಲುವ ಮೂಲಕ ಮತ್ತೆ ಕ್ಷೇತ್ರ ಯುಡಿಎಫ್ ಪಾಲಾಯಿತು. ಎಲ್ ಡಿಎಫ್ ಈ ಬಾರೀ ಮೂರನೇ ಸ್ಥಾನಕ್ಕೆ ತಲುಪಿತು. 2011 ರಲ್ಲಿ ಭಾರೀ ಪೈಪೋಟಿ ನಡೆದಿತ್ತು . ಯು ಡಿ ಎಫ್ ನಿಂದ ಪಿ . ಬಿ ಅಬ್ದುಲ್ ರಜಾಕ್, ಎಲ್ ಡಿ ಎಫ್ ನಿಂದ ಮಾಜಿ ಶಾಸಕ ಸಿ . ಎಚ್ ಕುಞ0ಬು ಹಾಗೂ ಬಿಜೆಪಿಯಿಂದ ಕೆ. ಸುರೇಂದ್ರನ್ ಕಣಕ್ಕಿಳಿದರು. ಆದರೆ ಪಿ.ಬಿ ಅಬ್ದುಲ್ ರಜಾಕ್ ಕೇವಲ 89 ಮತಗಳ ಅಂತರದಿಂದ ಗೆಲ್ಲುವ ಮೂಲಕ ಎರಡನೇ ಭಾರೀ ವಿಧಾನಸಭೆ ಪ್ರವೇಶಿಸಿದರು. ಬಿಜೆಪಿ ಯ ಕೆ . ಸುರೇಂದ್ರನ್ 89 ಮತಗಳ ಅಂತರದಿಂದ ಸೋಲು ಕಂಡರು.ಎಲ್ ಡಿ ಎಫ್ ತೃತೀಯ ಸ್ಥಾನಕ್ಕೆ ತೃಪ್ತಿಕೊಂಡಿತು .
ಆದರೆ ಶಾಸಕರಾಗಿದ್ದ ಪಿ . ಬಿ ಅಬ್ದುಲ್ ರಜಾಕ್ ರವರ ನಿಧನದ ಹಿನ್ನಲೆಯಲ್ಲಿ ನಡೆಯುತ್ತಿರುವ ಉಪಚುನಾವಣೆ ಯಲ್ಲಿ ಈ ಭಾರೀ ಮೂರು ಪಕ್ಷಗಳು ಹೊಸ ಮುಖಗಳನ್ನು ಕಣಕ್ಕಿಳಿಸುವ ಮೂಲಕ ಅದೃಷ್ಟ ಪರೀಕ್ಷಿಸುತ್ತಿದೆ.ಯುಡಿಎಫ್ ನಿಂದ ಎಂ.ಸಿ ಖಮರುದ್ದೀನ್ , ಎಲ್ ಡಿ ಎಫ್ ನಿಂದ ಎಂ.ಶಂಕರ ರೈ, ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಕಣಕ್ಕಿಸಲಾಗಿದ್ದು , ಈ ಪೈಕಿ ರವೀಶ ತಂತ್ರಿ 2016 ರಲ್ಲಿ ಕಾಸರಗೋಡು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಖಮರುದ್ದೀನ್ ಮತ್ತು ಶಂಕರ ರೈ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಮೂರು ಪಕ್ಷಗಳಿಗೆ ಈ ಚುನಾವಣೆ ಅಷ್ಟು ಸುಲಭವಲ್ಲ ಎನ್ನಬಹುದು. ಉಪಚುನಾವಣೆಯಾದುದರಿಂದ ತನ್ನೆಲ್ಲಾ ಶಕ್ತಿ ಬಳಸಿ ಮೂರು ಪಕ್ಷಗಳು ಪ್ರಯತ್ನ ಆರಂಭಿಸಿದೆ. ಯುಡಿಎಫ್ ತನ್ನ ಗೆಲುವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೆ ಬಿಜೆಪಿ ಕಳೆದ ಬಾರೀ ಸ್ವಲ್ಪದರಲ್ಲೇ ತಪ್ಪಿ ಹೋದ ಕ್ಷೇತ್ರವನ್ನು ಗೆಲ್ಲುವ ಎಲ್ಲಾ ಕಾರ್ಯತಂತ್ರಕ್ಕೆ ಮುಂದಾಗಿದೆ. ಎಲ್ ಡಿ ಎಫ್ 2006 ರಲ್ಲಿ ಎರಡೂ ಪಕ್ಷವನ್ನು ಹಿಂದಿಕ್ಕಿ ಅನಿರೀಕ್ಷಿತ ಗೆಲುವು ಪುನರರಾವರ್ತನೆಯ ಕನಸಿನಲ್ಲಿದೆ.
ಯುಡಿಎಫ್ ಆರು ಭಾರೀ ಗೆಲುವು ಕಂಡಿದೆ. 1987 ರಿಂದ 2001 ರ ತನಕ ಸತತ ನಾಲ್ಕು ಬಾರೀ ಚೆರ್ಕಳಂ ಅಬ್ದುಲ್ಲ, 2011 ಮತ್ತು 2016 ರಲ್ಲಿ ಗೆಲುವಿನ ಪತಾಕೆ ಹಾರಿಸಿದೆ. ಸಿಪಿಐ ಎರಡು ಬಾರಿ , ಸಿಪಿಎಂ ಒಂದು ಬಾರಿ ಗೆಲುವು ಸಾಧಿಸಿದೆ. ಏಳು ಬಾರೀ ಬಿಜೆಪಿ ಎರಡನೇ ಸ್ಥಾನ ಪಡೆದಿದ್ದರೂ ಇದುವರೆಗೂ ಖಾತೆ ತೆರೆದಿಲ್ಲ. ರಾಜ್ಯ ಮಟ್ಟದ ನಾಯಕರನ್ನು ಕಣಕ್ಕಿಳಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2016 ರ ಫಲಿತಾಂಶ ಮೂರು ಪ್ರಮುಖ ಪಕ್ಷಗಳಿಗೆ ಶಾಕ್ ಕೊಟ್ಟಿದೆ. ಕೆಲವೇ ಮತಗಳ ಅಂತರದಿಂದ ಸೋತ ಬಿಜೆಪಿ , ಸೋಲಿನಿಂದ ಪಾರಾದ ಯು ಡಿ ಎಫ್ , ಮೂರನೇ ಸ್ಥಾನ ಪಡೆದ ಯು ಡಿ ಎಫ್ ಈ ಭಾರೀ ಗೆಲುವು ಮಾತ್ರ ಮುಂದಿಟ್ಟುಕೊಂಡು ಪ್ರಚಾರದಲ್ಲಿ ಮಗ್ನವಾಗಿದ್ದು, ಚುನಾವಣೆಗೆ ದಿನಗಳು ಮಾತ್ರ ಉಳಿದಿರುವುದಂತೆ ಮಂಜೇಶ್ವರ ಎಲ್ಲರ ಕೇಂದ್ರ ಬಿಂದುವಾಗಿದೆ.