ಮಂಗಳೂರು, ಅ 17 (Daijiworld News/MSP): ಮನಪಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ,ಬಳಕೆ, ತಯಾರಿಕೆ, ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದರೂ ಈ ನಿಯಮಗಳನ್ನು ಪಾಲಿಸದ ವ್ಯಾಪಾರಸ್ಥರ ಉದ್ದಿಮೆಯ ಮೇಲೆ ಆರೋಗ್ಯ ವಿಭಾಗದ ಅಧಿಕಾರಿಗಳು ಬುಧವಾರದಂದು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ದಾಳಿ ವೇಳೆ ಸುಮಾರು 30 ಕೆಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ರೂ. 9500 ವಿಧಿಸಿದ್ದಾರೆ. ನಗರದ ಸೆಂಟ್ರಲ್ ಮಾರುಕಟ್ಟೆ, ಗಣಪತಿ ಶಾಲೆ ರಸ್ತೆ, ಭವಂತಿ ಸ್ಟ್ರೀಟ್ ಮುಂತಾದ ಸ್ಥಳಗಳಲ್ಲಿನ ಸುಮಾರು 20 ಗಿಂತ ಹೆಚ್ಚು ಅಂಗಡಿ, ಹೊಟೇಲ್, ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಬೇಕರಿಯಂತಹ ಉದ್ದಿಮೆಗಳಿಗೆ ದಾಳಿ ನಡೆಸಲಾಗಿತ್ತು.
ದಾಳಿಯಲ್ಲಿ ಆರೋಗ್ಯ ಇಲಾಖೆಯ ಪರಿಸರ ಅಭಿಯಂತರ ಶಬರಿನಾಥ ರೈ, ಆರೋಗ್ಯ ನಿರೀಕ್ಷಕರಾದ ಕರುಣಾಕರ್, ಭರತ್ ಕುಮಾರ್, ಯಶವಂತ್ ಕುಮಾರ್, ರಕ್ಷಿತಾ ಮೊದಲಾದವರು ಭಾಗವಹಿಸಿದ್ದರು.