ಮಂಗಳೂರು, ಅ 17 (Daijiworld News/MSP): ಗರ್ಭಿಣಿಗೆ ಕುಟುಂಬ ವರ್ಗ, ಬಂಧು ಬಳಗದವರು ಎಲ್ಲರೂ ಸೇರಿ ಸೀಮಂತ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯ ಸಿಬ್ಬಂದಿಗಳೆಲ್ಲರೂ ಸೇರಿ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಅರಿಶಿಣ, ಕುಂಕುಮ ಹಚ್ಚಿ, ಹಣ್ಣು ಹಂಪಲು, ರೇಷ್ಮೆ ಸೀರೆ ನೀಡಿ ಮಡಿಲು ತುಂಬಿ ಸಂಭ್ರಮಿಸಿದ್ದಾರೆ.
ನಗರದ ಕದ್ರಿ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಯಾದ ಮೂಲತಃ ಬೆಳಗಾವಿಯವರಾದ ಶ್ರೀಮತಿ ಗೌರವ್ವ ಗರ್ಭಿಣಿಯಾಗಿದ್ದು, ಅವರಿಗೆ ಅದೇ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ ಮತ್ತು ಠಾಣೆಯ ಇತರ ಅಧಿಕಾರಿ ಸಿಬ್ಬಂದಿಗಳೆಲ್ಲರೂ ಸೇರಿ ಸೀಮಂತ ನೆರವೇರಿಸಿದ್ರು. ಕರಾವಳಿಯ ಸಂಪ್ರದಾಯದಂತೆ ಬೆಂದೂರು ಸೆಬಾಸ್ಟಿಯನ್ ಸಭಾಂಗಣದಲ್ಲಿ ಮಂಗಳವಾರ ಸೀಮಂತ ಮಾಡಿ ಹಣ್ಣು ಹಂಪಲು ಹಾಗೂ ವಿವಿಧ ತಿನಿಸುಗಳನ್ನು ಬಡಿಸಿಲಾಯಿತು.
ಕಾರ್ಯಕ್ರಮದಲ್ಲಿ ಗೌರವ್ವ ಅವರ ಪತಿ ಶ್ರೀ ಶಿವಾನಂದ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.