ಮಂಗಳೂರು, ಅ.18(Daijiworld News/SS): ಶಿಕ್ಷಕ ವೃತ್ತಿಯು ಉಳಿದ ವೃತ್ತಿಗಳಿಗಿಂತ ಹೆಚ್ಚು ಜೀವಂತವಾದದ್ದು ಹಾಗೂ ಸ್ವಾರಸ್ಯಕರವಾದುದು ಎಂದು ಖ್ಯಾತ ಹಾಸ್ಯ ಸಾಹಿತಿ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ ಭುವನೇಶ್ವರಿ ಹೆಗಡೆ ಹೇಳಿದರು.
ಅವರು ನಗರದ ಗೋಕರ್ಣನಾಥ ಬಿ ಎಡ್ ಕಾಲೇಜಿನಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಬಳಿಕ ಮಾತನಾಡಿದರು. ಜೀವಂತ ಫೈಲುಗಳ ಜೊತೆಗೆ ಅನೇಕ ಪ್ರಯೋಗಗಳನ್ನು ಮಾಡಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣಿಭೂತರಾಗುವ ಅವಕಾಶವನ್ನು ಈ ವೃತ್ತಿ ನಿಮಗೆ ಒದಗಿಸುತ್ತದೆ ಎಂದು ವಿದ್ಯಾರ್ಥಿಗಳಗೆ ಶುಭಹಾರೈಸಿದರು.
ವಿದ್ಯಾರ್ಥಿಗಳೊಂದಿಗೆ ಸಿಗುವ ಭಾವನಾತ್ಮಕ ಸಮಾಧಾನ ಸಂತೃಪ್ತಿಗೆ ಹಣದಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಿ ಎಡ್ ಕೋರ್ಸನ್ನು ಆರಿಸಿಕೊಳ್ಳುವ ಮೂಲಕ ಸಂತೃಪ್ತಿದಾಯಕ ಉದ್ಯೋಗವನ್ನು ನೀವೇ ಮುಂದೆ ಕಾಣಬಹುದು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ ದೀಪ್ತಿ ನಾಯಕ್ ಮಾತನಾಡಿ, ಅಧ್ಯಾಪಕರಾದವರು ತಮ್ಮ ವೈಯಕ್ತಿಕ ಕಷ್ಟ ಕೋಟಲೆಗಳನ್ನು ತರಗತಿಗಳಿಗೆ ಒಯ್ಯದೆ ಹಸನ್ಮುಖಿಗಳಾಗಿ ಪಾಠ ಮಾಡಬೇಕು ಎಂದರು. ಈ ವೇಳೆ ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕ್ಷಮಾದೇವಿ ನಿರ್ವಹಿಸಿದರು. ಅಕ್ಷತಾ ಸ್ವಾಗತಿಸಿ, ಅನ್ವಿತಾ ವಂದಿಸಿದರು.