ಮಂಗಳೂರು, ಅ 18 (Daijiworld News/MSP): ವಿವಾಹವಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 70 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕೆಮ್ರಾಲ್ ಅತ್ತೂರು ಗ್ರಾಮ ಪಡುಬಳಿಕೆ ನಿವಾಸಿ ಅಜಿತ್ ಶೆಟ್ಟಿ (23) ಶಿಕ್ಷೆಗೊಳಗಾದ ಅಪರಾಧಿ. ಸ್ನೇಹಿತೆಯ ಮೂಲಕ ಪರಿಚಿತನಾಗಿದ್ದ ಅಜಿತ್ ಶೆಟ್ಟಿ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಪ್ರೀತಿಸಲಾರಂಭಿಸಿದ್ದರು. ಐದು ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿದ ಅಜಿತ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
2014ರ ಸೆಪ್ಟೆಂಬರ್ 4ರಂದು ಯುವತಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯನ್ನು ಅತ್ಯಾಚಾರ ಮಾಡಿದ್ದ. ಇದೇ ರೀತಿ ಯುವತಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ ಎಸಗಿದ್ದ. ಇದರಿಂದ ಯುವತಿ ಗರ್ಭಿಣಿಯಾಗಿದ್ದು, 2015ರ ಮೇ 29ರಂದು ಮೂಡುಬಿದಿರೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಯುವತಿಗೆ ಹೆರಿಗೆಯಾದ ಬಳಿಕ ಅಜಿತ್ ಶೆಟ್ಟಿ ಆಸ್ಪತ್ರೆಗೂ ಹೋಗದೆ ನಾಪತ್ತೆಯಾಗಿದ್ದ. ಇದರಿಂದ ನೊಂದ ಯುವತಿ 2015ರ ಜು.22ರಂದು ಆತನ ವಿರುದ್ಧ ಮತ್ತು ಮದುವೆ ಮಾಡಲು ನಿರಾಕರಣೆ ಮಾಡಿದ ಆತನ ತಂದೆ ಹರಿಶ್ಚಂದ್ರ, ಸಹೋದರ ಅಜಯ್ ಶೆಟ್ಟಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಜ್ಪೆ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ, ಅಜಿತ್ ಶೆಟ್ಟಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಮಗುವಿನ ಡಿಎನ್ಎ ಪರೀಕ್ಷೆ ಮಾಡಲಾಗಿದ್ದು, ಅಜಿತ್ ಶೆಟ್ಟಿ ‘ಜೈವಿಕ ತಂದೆ’ ಎಂಬುದು ಸಾಬೀತಾಗಿದೆ. ಒಂಬತ್ತು ಮಂದಿಯ ಸಾಕ್ಷಿ ವಿಚಾರಣೆ ನಡೆಸಲಾಗಿದ್ದು, 11 ದಾಖಲೆಗಳನ್ನು ಪರಿಗಣಿಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಯಿದುನ್ನೀಸಾ, ಈ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ 50 ಸಾವಿರ ಸಂತ್ರಸ್ತೆಗೆ ಹಾಗೂ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಮಗುವಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯದ ತೀರ್ಪಿನಲ್ಲಿ ಆದೇಶ ಮಾಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.