ಮಂಗಳೂರು, ಜ, 5: ಕೊಟ್ಟಾರ ಚೌಕಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿರುವ ಬಶೀರ್ ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಇದೀಗ ಬಶೀರ್ ಬದುಕಿ ಬರಲಿ ಎಂದು ಕುಟುಂಬದ ಸದಸ್ಯರು ದೇವರ ಮೊರೆ ಹೋಗಿದ್ದಾರೆ. ಬಶೀರ್ ಆರೋಗ್ಯ ಸುಧಾರಿಸಲು ಕುಟುಂಬದ ಸದಸ್ಯರು ಬೆಳಗ್ಗೆಯಿಂದ ಉಪವಾಸ ಕೈಗೊಂಡಿದ್ದಾರೆ.
ಬಶೀರ್ ಪತ್ನಿ ಕುಲ್ಸುಮ್, ಮಕ್ಕಳಾದ ಇಮ್ರಾನ್, ಇರ್ಫಾನ್, ಇಜ್ವಾನ್ ಮತ್ತು ಪುತ್ರಿ ಇಮ್ರಾಝ ಉಪವಾಸ ನಡೆಸುತ್ತಿದ್ದು, ಬಶೀರ್ ಬದುಕಿ ಬರಲಿ ಎಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಒಂದೆಡೆ ಬಶೀರ್ ಜೀವನ್ಮರಣ ಸ್ಥಿತಿಯಲ್ಲಿದ್ದರೆ, ಇನ್ನೊಂದೆಡೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ದುಷ್ಕರ್ಮಿಗಳು ಮಚ್ಚು ತಲ್ವಾರುಗಳಿಂದ ಬಷೀರ್ ಮೇಲೆ ಕೊಲೆ ಯತ್ನ ನಡೆಸಿದ್ದರು. ಪರಿಣಾಮ, ಬಶೀರ್ ಅವರ ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಲಿವರ್ ಮತ್ತು ಕಿಡ್ನಿಗೆ ಹಾನಿಯಾಗಿದೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಬಷೀರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.