ಸುಳ್ಯ, ಅ 18 (Daijiworld News/MSP): ಒಂದೇ ತಿಂಗಳಲ್ಲಿ ಭೀಕರ ಅಪಘಾತದಲ್ಲಿ ಏಳು ಜೀವ ಬಲಿ ಪಡೆದುಕೊಂಡಿರುವ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಸುಳ್ಯ ಸಮೀಪದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಅ.17 ರಂದು ರಾತ್ರಿ ವಾಹನ ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುಳ್ಯದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಶೆವರ್ಲೆ ಬೀಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಅಡ್ಕಾರ್ ಮಾವಿನ ಕಟ್ಟೆ ಬಳಿ ಢಿಕ್ಕಿ ಸಂಭವಿಸಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇತ್ತೀಚೆಗೆ ನಡೆದ ಸರಣಿ ಅಪಘಾತದಲ್ಲಿ ಒಟ್ಟು 7 ಮಂದಿ ಅಸುನೀಗಿದ್ದರು. ಹೆದ್ದಾರಿ ಪ್ರಾಧಿಕಾರವು ಅಪಾಯಕಾರಿ ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.