ಬೆಳ್ತಂಗಡಿ, ಅ 18 (Daijiworld News/MSP): ಬಡವರಿಗೆ ನೀಡುವ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಶ್ರೀಮಂತರು ಪಡೆದುಕೊಂಡಿದ್ದರೆ ಅವರು ಕೂಡಲೇ ಹಿಂದಿರುಗಿಸಬೇಕು ಇಲ್ಲವಾದಲ್ಲಿ ಕ್ರಿಮಿನಲ್ ಕೇಸು ಹಾಗೂ ದಂಡ ಹಾಕಲಾಗುವುದು ಎಂದು ಸರಕಾರ ಎಚ್ಚರಿಸಿದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 270 ಮಂದಿ ತಮ್ಮ ಬಿಪಿಎಲ್ಕಾರ್ಡ್ನ್ನು ಸ್ವಇಚ್ಛೆಯಿಂದ ಹಿಂದಿರುಗಿಸಿದ್ದಾರೆ.
ರಾಜ್ಯದಲ್ಲಿ ಕುಟುಂಬಗಳ ಸಂಖ್ಯೆಗಿಂತ ಹೆಚ್ಚು ಬಿಪಿಎಲ್ ಕಾರ್ಡ್ ವಿತರಣೆಯಾಗಿವೆ. ಬಡವರಿಗೆ ಸಿಗಬೇಕಾದ ಸರಕಾರದ ಪಡಿತರ ಸೌಲಭ್ಯಗಳು ಆರ್ಥಿಕವಾಗಿ ಸಬಲರಾದವರಿಗೆ ಹೋಗುತ್ತಿದ್ದು, ಇದರಿಂದ ಸರಕಾರಕ್ಕೆ ನಷ್ಟ ಉಂಟಾಗುತ್ತಿತ್ತು. ಸರಕಾರ ಹಲವಾರು ಬಾರಿ ಆರ್ಥಿಕವಾಗಿ ಬಲಾಢ್ಯರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಕಾರ್ಡ್ಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದರೂಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಕಠಿಣಆದೇಶವನ್ನು ನೀಡಿದುದರ ಹಿನ್ನಲೆಯಲ್ಲಿ ಕಾರ್ಡುಗಳು ಹಿಂದಿರುಗಿಸಲ್ಪಟ್ಟಿವೆ.
ಮತಗಳನ್ನು ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳಿಗೆ ಬಿಪಿಎಲ್ ಕಾರ್ಡುಗಳನ್ನು ಹಂಚುವುದೇ ಪ್ರಮುಖ ಕಾಯಕವಾಗಿ ಹೋಗಿತ್ತು. ಆರ್ಥಿಕ ದುರ್ಬಲರಗಿಂತ ಹೆಚ್ಚಾಗಿ ಸಬಲರೇ ಕಾರ್ಡುಗಳನ್ನು ಪಡೆದುಕೊಂಡಿದ್ದರು. ಇದರಿಂದಾಗಿ ತಾಲೂಕಿನಲ್ಲಿ 3,334 ಅಂತ್ಯೋದಯ ಕಾರ್ಡುಗಳಿದ್ದು 15,033 ಫಲಾನುಭವಿಗಳಿದ್ದಾರೆ. 45,050 ಬಿಪಿಎಲ್ ಕಾರ್ಡುಗಳಿದ್ದು 1,79,071 ಫಲಾನುಭವಿಗಳಿದ್ದಾರೆ. ಪಡಿತರ ಬಂದ ದಿನ ನ್ಯಾಯಬೆಲೆ ಅಂಗಡಿಗಳ ಎದುರು ಕಾರು, ಜೀಪುಗಳೇ ಕಾಣಿಸಿಕೊಂಡಿರುತ್ತಿದ್ದವು. ಇನ್ನು ಮಾತ್ರ ಇದಕ್ಕೆ ತಡೆ ಬೀಳುವ ಸಮಯ ಬಂದಿದೆ. ಇದೀಗ ಮೊದಲ ಹಂತವಾಗಿ ತಾಲೂಕಿನಲ್ಲಿ 270 ಕಾರ್ಡಗಳು ಸೆರೆಂಡರ್ ಆಗಿವೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದಾಗಿ ಸಮಾಜದಲ್ಲಿ ಆರ್ಥಿಕ ಸುಧೃಢತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಯೋಜನೆಗೆ ಸೇರಿದ ಬಡವರೆಲ್ಲಾ ಯೋಜನೆಯ ಅನುಕೂಲತೆಗಳಿಂದಾಗಿ ಹಂತ ಹಂತವಾಗಿ ಸಬಲರಾಗಿದ್ದಾರೆ. ಹೀಗಾಗಿ ಬಿಪಿಎಲ್ನವರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದೆ. ತಜ್ಞರ ಪ್ರಕಾರ ಸರಕಾರದ ಮಾನದಂಡಕ್ಕೆ ಅನ್ವಯಿಸುವಂತೆ ತಾಲೂಕಿನಲ್ಲಿ ಕೇವಲ ಐದು ಸಾವಿರದೊಳಗೆ ಮಾತ್ರ ಬಿಪಿಎಲ್ಗೆ ಅರ್ಹರಿರಬಹುದು ಎಂದು ಅಂದಾಜಿಸಲಾಗಿದೆ.
ಸರಕಾರದ ಆದೇಶದ ಪರಿಣಾಮವಾಗಿ ಸೆಪ್ಟೆಂಬರ್ ನಿಂದ ನವೆಂಬರ್ 15 ರೊಳಗೆ ತಾಲೂಕಿನಲ್ಲಿ 270 ಮಂದಿ ತಮ್ಮ ಪಡಿತರ ಕಾರ್ಡ್ಗಳನ್ನು ಹಿಂತಿರುಗಿಸಿದ್ದಾರೆ ಎಂದು ಬೆಳ್ತಂಗಡಿ ಆಹಾರ ನಿರೀಕ್ಷಕ ವಿಶ್ವ ಅವರು ತಿಳಿಸಿದ್ದಾರೆ. ಇದರಲ್ಲಿ ಪಡಿತರ ಕಾರ್ಡ್ ಪಡೆದ ನಂತರದ ದಿನಗಳಲ್ಲಿ ಮಿತಿಗಿಂತ ಹೆಚ್ಚು ಭೂಮಿ ಹೊಂದಿರುವವರು. ನಾಲ್ಕು ಚಕ್ರದ ವಾಹನ ಇರುವವರು, ಒಂದು ಸಾವಿರಕ್ಕಿಂತ ಅಧಿಕ ಚದರ ಅಡಿಯ ಮನೆ ಹೊಂದಿರುವವರು, ಆದಾಯ ಜಾಸ್ತಿಯಾದವರು ತಮ್ಮಲ್ಲಿರುವ ಕಾರ್ಡಗಳನ್ನು ಹಿಂದಿರುಗಿಸಿದ್ದಾರೆ. ಮುಂದಿನ ದಿನಗಳಲಿ ಹಿಂತಿರುಗಿಸುವವರ ಸಂಖ್ಯೆ ಅಧಿಕವಾಗಲಿದೆ ಎಂದು ಹೇಳಲಾಗುತ್ತಿದೆ.