ಮಂಗಳೂರು, ಅ19 (Daijiworld News/MSP): ಪ್ರಗತಿ ಪರಿಶೀಲನ ಸಭೆಗಳಲ್ಲಿ ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳ ಹಾಜರಾತಿ ಕಡ್ಡಾಯ.ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಉಪಸ್ಥಿತರಿದ್ದು, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯ ಪ್ರಗತಿಯನ್ನು ಸಭೆಗೆ ಒದಗಿಸಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಎಚ್ಚರಿಕೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಕೃಷಿ ಇಲಾಖೆ ಎಸ್ಸಿಪಿ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ರೂ16.40 ಲಕ್ಷ ಅನುದಾನ ಮಂಜೂರಾಗಿದ್ದು, ಶೇ 50 ರಷ್ಟು ಭೌತಿಕ ಸಾಧನೆಯಾಗಿದೆ. ಟಿಎಸ್ಪಿ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ರೂ 7.40 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ 64ರಷ್ಟು ಸಾಧನೆಯಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಎಸ್.ಬಿ. ವಿವರ ನೀಡಿದರು.
ತೋಟಗಾರಿಗೆ ಇಲಾಖೆ ಎಸ್ಸಿಪಿ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ರೂ.3.40 ಲಕ್ಷ ಅನುದಾನ ಮಂಜೂರಾಗಿದ್ದು, ಶೇ 52 ರಷ್ಟು ಭೌತಿಕ ಸಾಧನೆಯಾಗಿದೆ. ಟಿಎಸ್ಪಿ ಯೋಜನೆಯಡಿ ರೂ.4.48 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ 44 ರಷ್ಟು ಸಾಧನೆಯಾಗಿದೆ ಎಂದು ಹೇಳಿದರು.