ಮಂಗಳೂರು, ಅ 19 (Daijiworld News/MSP): ರಾಜ್ಯ ಸರ್ಕಾವೂ ಎರಡು ದಿನಗಳ ಹಿಂದೆಯಷ್ಟೇ, ಆಯ್ಕೆ ಮಾಡಿದ್ದ ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ನಾಮಾಂಕಿತರಾದ ಸಾಯಿಗೀತಾ ಮತ್ತು ಡಾ| ವೈ.ಎನ್ ಶೆಟ್ಟಿ ತಮ್ಮ ಸದಸ್ಯತ್ವದಿಂದ ಹಿಂದೆ ಸರಿದಿದ್ದಾರೆ. ಇದರಿಂದ ನೇಮಕ ಆದೇಶ ಹೊರಡಿಸಿದ ಬಿಜೆಪಿ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.
ಇದರಲ್ಲಿ ಸಾಯಿಗೀತಾ ಅವರು ನಾನು ಕೆಲವೊಂದು ಸಾಹಿತ್ಯದ ಕೆಲಸದಲ್ಲಿ ಹಾಗೂ ತುಳು ಜ್ಞಾತಿ ಪದ ಸಂಚಯದ ಡಿಜಿಟಲ್ ಕಾರ್ಯದಲ್ಲಿ ತೊಡಗಿದ್ದು, ಸಂಶೋಧನ ಕಾರ್ಯ ನಡೆಯುತ್ತಿದೆ. ಹೀಗಾಗಿ ಅಕಾಡಮಿ ಸದಸ್ಯೆಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯ ಹೀಗಾಗಿ ನಾನು ಸದಸ್ಯತ್ವದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಡಾ| ವೈ.ಎನ್ ಶೆಟ್ಟಿ ಅವರು. " ನಾನು 2017 ರಿಂದ ತುಳು ಅಕಾಡೆಮಿ ಸದಸ್ಯನಾಗಿದ್ದೇನೆ. ಹೀಗಾಗಿ ತಾಂತ್ರಿಕವಾಗಿ ಎರಡನೇ ಬಾರಿ ಮತ್ತೆ ಸದಸ್ಯನನ್ನಾಗಿ ಮಾಡುವುದು ಸರಿಯಲ್ಲ. ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಅಧ್ಯಕ್ಷ ಸ್ಥಾನ ಆಯ್ಕೆಯಲ್ಲಿ ಹಿರಿತನ ಕಡೆಗಣಿಸಲಾಗಿದೆ ಎಂದು ಸದಸ್ಯ ಸ್ಥಾನದಿಂದ ದೂರ ಸರಿದಿದ್ದೇನೆ" ಎಂದಿದ್ದಾರೆ.