ಉಡುಪಿ, ಅ 19 (Daijiworld News/MSP): ಶಿರ್ವ ಚರ್ಚ್ನ ಸಹಾಯಕ ಧರ್ಮಗುರು ಫಾ.ಮಹೇಶ್ ಡಿಸೋಜ ಆತ್ಮಹತ್ಯೆ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಾತ್ರವಲ್ಲದೆ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಖುದ್ದು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಶಿರ್ವಾ ಚರ್ಚ್ನ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾಗಿದ್ದ ಪಾ.ಮಹೇಶ್ ಡಿಸೋಜ ಅವರು ಅಕ್ಟೋಬರ್ 11 ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಅಕ್ಟೋಬರ್ 15 ಮಂಗಳವಾರ ನಡೆಸಲಾಗಿತ್ತು.
ಆದರೆ ಅವರ ಸಾವು ಇದೀಗ ಮೂವರು ಮುಗ್ದ ಯುವಕರ ಜೀವನದ ಮೇಲೆ ಪರಿಣಾಮ ಬೀರಿದ್ದು, "ನಮಗೂ ಫಾ. ಮಹೇಶ್ ಅವರ ಆತ್ಮಹತ್ಯೆಯ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ನೊಂದು ನುಡಿದ್ದಾರೆ.
"ಮಹೇಶ್ ಅವರ ಮೃತದೇಹ ಪತ್ತೆಯಾದ ನಂತರ ಚರ್ಚ್ ಆವರಣದಲ್ಲಿದ್ದ ಸಾಕ್ಷಿಯನ್ನು ಮಾತ್ರ ಇಲ್ಲಿಯವರೆಗೆ ವಿಚಾರಿಸಿ ಹೇಳಿಕೆ ಪಡೆಯಲಾಗಿದೆ. ಪಾ.ಮಹೇಶ್ ಡಿಸೋಜ ಅವರ ಸಾವು ಮೆಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದರೂ, ನಾವು ಮರಣೋತ್ತರ ವರದಿ ಕೈಸೇರುವುದನ್ನು ಕಾಯುತ್ತಿದ್ದೇವೆ. ಆ ನಂತರವೇ ಪ್ರಕರಣ ತನಿಖೆ ಮತ್ತಷ್ಟು ವೇಗ ಪಡೆಯಲಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಮಹೇಶ್ ಅವರ ಸಾವಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದರಂತೆ ವದಂತಿಗಳು ಹಬ್ಬುತ್ತಿವೆ. ಫಾ. ಮಹೇಶ್ ಅವರ ಸಾವಿಗೆ ಮೂವರು ಯುವಕರು ಕಾರಣ. ಇವರು ಮಹೇಶ್ ಅವರೊಂದಿಗೆ ಜಗಳವಾಡಿದ್ದು ಇದು ಆತ್ಮಹತ್ಯೆಯಲ್ಲಿ ಕೊನೆಗೊಂಡಿತು, ಈ ಯುವಕರೇ ಧರ್ಮಗುರುಗಳ ಕೊಲೆಗಾರರು ಎಂಬ ವದಂತಿಯ ಜೊತೆಗೆ ಈ ಮೂವರ ಪೋಟೋಗಳನ್ನು ಕೂಡಾ ಸೋಷಿಯಲ್ ಮೀಡಿಯಾ ಹರಿಯಬಿಡಲಾಗಿದೆ.
"ಫಾ. ಮಹೇಶ್ ಅವರೊಂದಿಗೆ ನಮಗೆ ಯಾವುದೇ ಮನಸ್ತಾಪವಿರಲಿಲ್ಲ. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದರೂ, ಸತ್ಯಕ್ಕಿಂತ ಸುಳ್ಳುಸುದ್ದಿಯನ್ನೇ ಪ್ರಚಾರಪಡಿಸಲಾಗುತ್ತಿದೆ, ಬೇರೆ ದಾರಿ ಕಾಣದೆ ನಾವು ಮೂವರು ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದೇವೆ" ಎಂದು ಅಳಲು ತೊಡಿಕೊಂಡಿದ್ದಾರೆ .
ಈ ಮೂವರು ಯುವಕರಲ್ಲಿ ಓರ್ವ ಶಿರ್ವದಲ್ಲಿರದೆ, ಕೆಲಸದ ನಿಮಿತ್ತ ಗುಜರಾತ್ ನಲ್ಲಿ ವಾಸವಾಗಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿನ ಅಪಪ್ರಚಾರದಿಂದಾಗಿ ನಮಗೆ ಮಾನಸಿಕ ಹಿಂಸೆಯಾಗುತ್ತಿದ್ದು ಸಾರ್ವಜನಿಕವಾಗಿ ತಲೆ ಎತ್ತಿ ತಿರುಗಾಡದಂತಾಗಿದೆ ಎಂದು ಯುವಕರು ಹಾಗೂ ಅವರ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
"ನಮ್ಮ ಫೋಟೋಗಳ ಸಮೇತ ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು, ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಯಾವುದೇ ಅಮಾಯಕರನ್ನು ಈ ರೀತಿ ಶಿಕ್ಷಿಸಬಾರದು " ಎಂದು ಸಂತ್ರಸ್ತ ಯುವಕರೊಬ್ಬರು ದಾಯ್ಜಿವಲ್ಡ್ ಗೆ ತಿಳಿಸಿದ್ದಾರೆ.
ಮಹೇಶ್ ಡಿಸೋಜಾ ಅವರ ಸಾವು ಆತ್ಮಹತ್ಯೆಯ ಪ್ರಕರಣದಂತೆ ಕಾಣಿಸುತ್ತದೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳ ತಂಡ ಮರಣೋತ್ತರ ವರದಿ ಕೈ ಸೇರುವುದನ್ನು ಕಾಯುತ್ತಿದೆ.