ಕಾಸರಗೋಡು, ಅ 19 (DaijiworldNews/SM): ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ಕೆ ಶನಿವಾರ ಸಂಜೆ ತೆರೆಬಿದ್ದಿದೆ. ಕೊನೇ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದರು.
ಹೊಸಂಗಡಿ, ಮಂಜೇಶ್ವರ, ಉಪ್ಪಳ, ಬಂದ್ಯೋಡು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ರೋಡ್ ಶೋ ನಡೆಸಲಾಯಿತು. ಹಾಗೂ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಎಲ್ಲಾ ಪ್ರಯತ್ನ ನಡೆಸಿದರು.
ಸಂಜೆ ಕುಂಬಳೆಯಲ್ಲಿ ಮೂರು ಪಕ್ಷದ ಬೃಹತ್ ರ್ಯಾಲಿಯೊಂದಿಗೆ ಪ್ರಚಾರಕ್ಕೆ ತೆರೆ ಬಿದ್ದಿದೆ. ಹದಿನೇಳು ದಿನಗಳ ಕಾಲ ನಡೆದ ಪ್ರಚಾರ ಕಾರ್ಯಕ್ಕೆ ರಾಷ್ಟ್ರ, ರಾಜ್ಯ ನಾಯಕರು ಸೇರಿದಂತೆ ಘಟಾನುಘಟಿ ಮುಖಂಡರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ನಿಧನದಿಂದ ತೆರವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದೆ. 24ರಂದು ಮತಎಣಿಕೆ ನಡೆಯಲಿದೆ.
2016ರಲ್ಲಿ ಕೇವಲ 89 ಮತಗಳ ಅಂತರದಿಂದ ಯುಡಿಎಫ್ ಅಭ್ಯರ್ಥಿಯಾಗಿದ್ದ ಪಿ . ಬಿ ಅಬ್ದುಲ್ ರಜಾಕ್ ಬಿಜೆಪಿಯ ಕೆ. ಸುರೇಂದ್ರನ್ ರವರನ್ನು ಸೋಲಿಸಿದ್ದರು. ಇದರಿಂದ ಈ ಚುನಾವಣೆ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಈ ಬಾರೀ ಮೂರು ಪಕ್ಷಗಳು ಹೊಸಮುಖವನ್ನು ಕಣಕ್ಕಿಲಿಸಿದ್ದು, ಇದರಿಂದ ಉಪಚುನಾವಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.