ಭಟ್ಕಳ, ಅ 20 (Daijiworld News/MSP): ಇಲ್ಲಿನ ಲಾಡ್ಜ್ ಒಂದರಲ್ಲಿ ಐವರ ತಂಡವೊಂದು ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೊಲೆಯಾಗಿರುವ ಯುವಕನನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗ್ಲಿಹೊಂಡ ನಿವಾಸಿ ಅಫ್ಫಾನ್ ಜಬಾಲಿ ಬಿನ್ ನವರಂಗ್ ಮುಹಮ್ಮದ್ ಅಲಿ(25) ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಸ್ಥಳೀಯರು ಓರ್ವನನ್ನು ಪೊಲೀಸರು ವಶಕ್ಕೆನೀಡಿದ್ದು ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೃತ ಯುವಕನ ಸಹೋದರ ನಬೀಲ್ ನೀಡಿದ ಮಾಹಿತಿಯಂತೆ, 9.30 ಸುಮಾರು ತನ್ನ ಸಹೋದರ ಅಪ್ಫಾನ್ನಿಂದ ತನ್ನ ಮೊಬೈಲ್ಗೆ ಕರೆ ಬಂದಿದ್ದು ನನಗೆ ಲಾಡ್ಜ್ ನಲ್ಲಿ ಕೂಡಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ನಾನು ಲಾಡ್ಜಿಗೆ ತಲುವಷ್ಟರಲ್ಲಿ ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ. ದುಷ್ಕರ್ಮಿಗಳು ನನ್ನನ್ನು ನೋಡಿದ ತಕ್ಷಣ ಪರಾರಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾನೆ.
ಯುವಕ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಹಣದ ವ್ಯವಹಾರ ಅಥವಾ ಇನ್ಯಾವುದೋ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಸಹಾಯಕ ಪೊಲೀಸ್ ಅಧೀಕ್ಷ ನಿಖಿಲ್, ಪಿ.ಎಸ್.ಐ ಕುಡಗುಂಡಿ ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರು ಹೋಟೆಲ್ ನಲ್ಲಿ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.